

ಧಾರವಾಡ: ಕೋವಿಡ್ ಹಿನ್ನೆಲೆಯಲ್ಲಿ ಮುಂದೂಡಿಕೆಯಾಗಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ ಮೊದಲ ದಿನವಾದ ಗುರುವಾರ ಜಿಲ್ಲಾದ್ಯಂತ ಸುಗಮವಾಗಿ ಜರುಗಿತು. ಜಿಲ್ಲೆಯ 90 ಪರೀಕ್ಷೆ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ಪರೀಕ್ಷೆ ಬರೆದರು.
ಗುರುವಾರ ನಿಗದಿಯಾಗಿದ್ದ ದ್ವಿತೀಯ ಭಾಷೆ ಪರೀಕ್ಷೆಗೆ ನೋಂದಾಯಿತ 26,599 ವಿದ್ಯಾರ್ಥಿಗಳ ಪೈಕಿ 25,561ವಿದ್ಯಾರ್ಥಿಗಳು ಹಾಜರಾಗಿದ್ದರು. 1038 (690 ಬಾಲಕ- 348 ಬಾಲಕಿ) ಪರೀಕ್ಷಾರ್ಥಿಗಳು ಗೈರು ಹಾಜರಾಗಿದ್ದರು. ಈ ಪೈಕಿ ಧಾರವಾಡ ನಗರದಲ್ಲಿ 5280 ಹಾಜರು, 393 ಗೈರು, ಧಾರವಾಡ ಗ್ರಾಮೀಣದಲ್ಲಿ 3109 ಹಾಜರು, 98 ಗೈರು, ಹುಬ್ಬಳ್ಳಿ ನಗರದಲ್ಲಿ 7813 ಹಾಜರು, 222 ಗೈರು, ಹುಬ್ಬಳ್ಳಿ ಗ್ರಾಮೀಣ 3122 ಹಾಜರು, 96 ಗೈರು, ಕಲಘಟಗಿ 2216 ಹಾಜರು, 48 ಗೈರು, ಕುಂದಗೋಳ 1904 ಹಾಜರು, 70 ಗೈರು, ನವಲಗುಂದದಲ್ಲಿ 2117 ವಿದ್ಯಾರ್ಥಿಗಳು ಹಾಜರಾಗಿ 111 ವಿದ್ಯಾರ್ಥಿಗಳು ಗೈರಾಗಿದ್ದರು.
ಕೋವಿಡ್ ಹಿನ್ನೆಲೆಯಲ್ಲಿ ಘೊಷಿಸಲಾದ ಕಂಟೇನ್ಮೆಂಟ್ ಪ್ರದೇಶಗಳಿಂದ 97 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅವರಿಗೆ ಮೊದಲೇ ನಿಗದಿಪಡಿಸಿದ್ದ ಪ್ರತ್ಯೇಕ ಕೊಠಡಿಗಳಲ್ಲಿ ಪರೀಕ್ಷೆ ಬರೆಯುವ ವ್ಯವಸ್ಥೆ ಮಾಡಲಾಗಿತ್ತು.
ಪರೀಕ್ಷಾ ಕೇಂದ್ರಕ್ಕೆ ತೆರಳಿದ ಪ್ರತಿಯೊಬ್ಬ ವಿದ್ಯಾರ್ಥಿಯ ಫೀವರ್ ಟೆಸ್ಟ್ ಮಾಡಲಾಯಿತು. ನಂತರ ತಲಾ ಒಂದೊಂದು ಮಾಸ್ಕ್ ಹಾಗೂ ಸ್ಯಾನಿಟೈಸರ್ ನೀಡಿ ಪ್ರವೇಶ ನೀಡಲಾಯಿತು. ಪರೀಕ್ಷಾ ಕೇಂದ್ರಗಳ ಆವರಣದಲ್ಲಿ ಪರಸ್ಪರ ಅಂತರ ಕಾಪಾಡುವಂತೆ ಗುರುತಿಸಲಾಗಿದ್ದ ಬಾಕ್ಸ್ಗಳಲ್ಲಿ ಸರದಿಯಲ್ಲಿ ನಿಂತು ವಿದ್ಯಾರ್ಥಿಗಳು ಕೇಂದ್ರದೊಳಗೆ ಪ್ರವೇಶಿಸಿದರು. ಪರೀಕ್ಷೆ ಮುಗಿದ ನಂತರವೂ ಪರಸ್ಪರ ಅಂತರದೊಂದಿಗೆ ಹೊರಗೆ ಬಿಡಲಾಯಿತು.
ಜಿಲ್ಲಾಧಿಕಾರಿ ದೀಪಾ ಚೋಳನ್ ಹಾಗೂ ಅಧಿಕಾರಿಗಳ ತಂಡ ನಗರದ ವಿವಿಧ ಪರೀಕ್ಷಾ ಕೇಂದ್ರಗಳಿಗೆ ತೆರಳಿ ಪರೀಕ್ಷೆ ವ್ಯವಸ್ಥೆಯನ್ನು ಪರಿಶೀಲಿಸಿದರು. ಕೆ.ಇ. ಬೋರ್ಡ್ ಶಾಲೆಯ ಪರೀಕ್ಷೆ ಕೇಂದ್ರಕ್ಕೆ ತೆರಳಿದ್ದ ಜಿಲ್ಲಾಧಿಕಾರಿಗೆ ಆಶಾ ಕಾರ್ಯಕರ್ತೆ ಫೀವರ್ ಟೆಸ್ಟ್ ನಡೆಸಿದರು. ಡಿಡಿಪಿಐ ಮೋಹನಕುಮಾರ ಹಂಚಾಟೆ ಹಾಗೂ ಇತರರಿದ್ದರು.
ಫೇಸ್ಶೀಲ್ಡ್ ಬಳಕೆ
ಕೆಲ ವಿದ್ಯಾರ್ಥಿಗಳು ಮುಂಜಾಗ್ರತೆ ಕ್ರಮವಾಗಿ ಮನೆಯಿಂದ ಮಾಸ್ಕ್ಗಳನ್ನು ಧರಿಸಿ ಬಂದಿದ್ದರು. ಇನ್ನೂ ಕೆಲವರು ಇಡೀ ಮುಖ ಮುಚ್ಚುವಂತೆ ಫೇಸ್ಶೀಲ್ಡ್ ಧರಿಸಿಕೊಂಡು ಬಂದಿದ್ದು ವಿಶೇಷವಾಗಿತ್ತು. ನಗರದ ಬಾಸೆಲ್ ಮಿಶನ್ ಪ್ರೌಢಶಾಲೆಯ ಶಿಕ್ಷಕಿಯೊಬ್ಬರು ರೇನ್ಕೋಟ್, ಕೈಗವಸು, ಮುಖ ಮುಚ್ಚುವ ದುಪಟ್ಟಾ ಧರಿಸಿ ಗಮನ ಸೆಳೆದರು.
ಮೇಜರ್ ಹಿರೇಮಠ ಭೇಟಿ
ಅವಳಿನಗರದ ವಿವಿಧ ಕೇಂದ್ರಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ವಾಯವ್ಯ ಕರ್ನಾಟಕ ವಲಯದ ಹೆಚ್ಚುವರಿ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಅವರು ಭೇಟಿ ನೀಡಿ ಮೊದಲ ದಿನದ ಮಾಹಿತಿ ಪಡೆದುಕೊಂಡರು.
ಪರೀಕ್ಷೆ ಕೇಂದ್ರಗಳಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸಿದ್ದನ್ನು ಖಾತ್ರಿಪಡಿಸಿಕೊಂಡರು. ಪರಸ್ಪರ ಅಂತರ, ಸ್ಯಾನಿಟೈಸೇಷನ್, ಥರ್ಮಲ್ ಸ್ಕ್ರೀನಿಂಗ್, ಮಾಸ್ಕ್ ಧರಿಸುವುದು ಸೇರಿ ಕೇಂದ್ರದಲ್ಲಿ ಕೈಗೊಂಡ ಸುರಕ್ಷತೆ ಕ್ರಮಗಳನ್ನು ಪರಿಶೀಲಿಸಿದರು.
ಪ್ರತಿದಿನವೂ ವಿದ್ಯಾರ್ಥಿಗಳನ್ನು ಥರ್ಮಲ್ ಸ್ಕ್ರೀನಿಂಗ್ ಪ್ರಕ್ರಿಯೆಗೆ ಒಳಪಡಿಸಬೇಕು. ಸ್ಯಾನಿಟೈಸರ್ ನೀಡಿ, ಮಾಸ್ಕ್ ಧರಿಸಿಯೇ ಕೊಠಡಿ ಪ್ರವೇಶಿಸುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಎಲ್ಲೂ ಕರೊನಾ ವೈರಸ್ ಸೋಂಕು ನುಸುಳಲು ಅವಕಾಶ ನೀಡಬಾರದು ಎಂದು ಪರೀಕ್ಷೆ ಕೇಂದ್ರಗಳ ಮುಖ್ಯಸ್ಥರಿಗೆ ಸೂಚಿಸಿದರು.