ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವಲ್ಲಿ ಲೋಪವಾದರೆ ಕಠಿಣ ಕ್ರಮ

15
Published on

ಮೈಸೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸುವಲ್ಲಿ ಲೋಪದೋಷಗಳು ಕಂಡುಬಂದರೆ ಕಠಿಣ ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಎಚ್ಚರಿಸಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಂಬಂಧ ತಮ್ಮ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದರು.


ಜಿಲ್ಲೆಯಲ್ಲಿ 37,475 ಮಕ್ಕಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ವಿದ್ಯಾರ್ಥಿ ಜೀವನವನ್ನು ನಿರ್ಧರಿಸುವಲ್ಲಿ ಈ ಪರೀಕ್ಷೆ ಪ್ರಮುಖ ತಿರುವಾಗಿರುತ್ತದೆ. ಆದ್ದರಿಂದ ವ್ಯವಸ್ಥಿತವಾಗಿ ಪರೀಕ್ಷೆ ನಡೆಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.


ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ರೀತಿಯ ಅವ್ಯವಸ್ಥೆ ಮತ್ತು ಅಕ್ರಮ ಕಂಡುಬಂದರೆ ಕೇಂದ್ರದ ಮುಖ್ಯ ಅಧಿಕಾರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್ ನಿಷೇಧಿಸಿದೆ ಎಂದರು.


ಅಂಗವಿಕಲ ಮಕ್ಕಳಿಗೆ 20 ನಿಮಿಷಗಳ ಅಧಿಕ ಅವಧಿ ನೀಡಲಾಗುವುದು. ಪರೀಕ್ಷಾ ಸಮಯ ಹತ್ತಿರವಾದಂತೆ ಮಕ್ಕಳಲ್ಲಿ ಒಂದು ರೀತಿಯ ಭಯ, ಆತಂಕ ಕಾಡುತ್ತದೆ. ಆದ್ದರಿಂದ ಆಪ್ತ ಸಮಾಲೋಚನೆ ನಡೆಸಿ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಬೇಕು. ಪರೀಕ್ಷಾ ಪೂರ್ವ ಸಿದ್ಧತೆ ಕುರಿತು ಮಾರ್ಗದರ್ಶನ ನೀಡಬೇಕು. ತರಗತಿ ಅವಧಿಯಲ್ಲಿ ಮಾತ್ರವಲ್ಲದೆ ಉಳಿದ ಸಮಯದಲ್ಲೂ ಮಕ್ಕಳ ಬಗ್ಗೆ ಕಾಳಜಿ ವಹಿಸಿ, ಅವರ ಶೈಕ್ಷಣಿಕ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದರು.


ಪರೀಕ್ಷೆಗೆ ಹೆಚ್ಚು ಮಕ್ಕಳು ಗೈರು ಹಾಜರಾಗದಂತೆ ಎಚ್ಚರ ವಹಿಸಬೇಕು. ಮಕ್ಕಳು ಯಶಸ್ವಿಯಾಗಿ ಪರೀಕ್ಷೆ ಎದುರಿಸಲು ನಿಮ್ಮ ಪ್ರಯತ್ನ ಹಾಕಿ ನಂತರ ಕಟ್ಟುನಿಟ್ಟಾಗಿ ಪರೀಕ್ಷೆ ನಡೆಸಬೇಕು. ಮಕ್ಕಳೊಟ್ಟಿಗೆ ಸಂವೇದನಾಶೀಲತೆಯಿಂದ ವರ್ತಿಸಬೇಕು. ಪರೀಕ್ಷಾ ಕೊಠಡಿಯಲ್ಲಿ ಗಾಬರಿಗೊಳ್ಳುವ ಮಕ್ಕಳನ್ನು ಸಮಾಧಾನದಿಂದ ಮಾತನಾಡಿಸಿ, ಕಾಳಜಿ ವಹಿಸಿ ಪರೀಕ್ಷೆ ಬರೆಯಲು ಪ್ರೋತ್ಸಾಹಿಸಬೇಕು. ಪ್ರತಿದಿನ ಮನೆಯಿಂದ ಪರೀಕ್ಷಾ ಕೇಂದ್ರಕ್ಕೆ ಬರಲು ತೊಂದರೆ ಇರುವ ಮಕ್ಕಳ ಬಗ್ಗೆ ಮಾತೃಹೃದಯದಿಂದ ವರ್ತಿಸಿ, ಹಾಸ್ಟೆಲ್ ವ್ಯವಸ್ಥೆ ಮಾಡಿ ಹಾಗೂ ಯಶಸ್ವಿಯಾಗಿ ಪರೀಕ್ಷೆ ನಡೆಸಿ ಎಂದು ಸೂಚಿಸಿದರು.


ಸರ್ಕಾರಿ ಬಸ್‌ನಲ್ಲಿ ಪರೀಕ್ಷೆ ಪ್ರವೇಶ ಪತ್ರ ತೋರಿಸಿ ಉಚಿತವಾಗಿ ಮಕ್ಕಳು ಪರೀಕ್ಷಾ ಕೇಂದ್ರಗಳಿಗೆ ಪ್ರಯಾಣಿಸಬಹುದು. ನಿಗದಿತ ಸಮಯದಲ್ಲಿ ಬಸ್‌ಗಳ ಸಮಸ್ಯೆ ಇದ್ದಲ್ಲಿ ಅಥವಾ ಬಸ್‌ಗಳು ನಿಲ್ಲಿಸದೆ ಇರುವಂತಹ ಸಮಸ್ಯೆಗಳು ಇದ್ದಲ್ಲಿ ಮುಂಚಿತವಾಗಿಯೇ ಗಮನಕ್ಕೆ ತರಬೇಕು. ಕೆಎಸ್‌ಆರ್‌ಟಿಸಿ ಅಧಿಕಾರಿಗಳೊಂದಿಗೆ ಮಾತನಾಡಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.


ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರಾಮಚಂದ್ರರಾಜೇ ಅರಸ್ ಮಾತನಾಡಿ, ಅಂಗವಿಕಲ ಮಕ್ಕಳಿಗೆ ಯಾವುದೇ ರೀತಿ ತೊಂದರೆ ಆಗದಂತೆ ನೆಲ ಮಹಡಿಯಲ್ಲೇ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು. ಪರೀಕ್ಷಾ ಕೇಂದ್ರಗಳಲ್ಲಿ ಮೂಲ ಸೌಕರ್ಯಗಳಾದ ಕುಡಿಯುವ ನೀರಿನ ವ್ಯವಸ್ಥೆ, ಶೌಚಗೃಹ, ಕೊಠಡಿಗಳು ಹಾಗೂ ಸಿಸಿ ಕ್ಯಾಮರಾ ವ್ಯವಸ್ಥೆ ಮಾಡಲಾಗುವುದು. ಪರೀಕ್ಷೆ ನಡೆಯುವ ವಿಷಯಗಳ ಶಿಕ್ಷಕರನ್ನು ಹೊರತುಪಡಿಸಿ, ಬೇರೆ ವಿಷಯಗಳ ಶಿಕ್ಷಕರನ್ನು ಶಿಕ್ಷಕರನ್ನು ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಲಾಗುವುದು. ಶಿಕ್ಷಕರ ಕೊರತೆ ಕಂಡುಬಂದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.


ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್ ಸ್ವಾಧೀನಾಧಿಕಾರಿ ಎಂದು ಒಬ್ಬ ಶಿಕ್ಷಕರನ್ನು ನೇಮಿಸಿ ಪರೀಕ್ಷೆಗೂ ಮೊದಲು ಎಲ್ಲ ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗುವುದು, ಪರೀಕ್ಷೆ ಮುಗಿದ ಮೇಲೆ ಹಿಂದಿರುಗಿಸುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net