

ಚಿತ್ರದುರ್ಗ: ಎಸ್ಸೆಸ್ಸೆಲ್ಸಿ ಪರೀಕ್ಷೆ-3ರ ಸಂಬಂಧ ಜಿಲ್ಲೆಯಲ್ಲಿ ಯಾವ ಲೋಪದೋಷಗಳಿಗೆ ಅವಕಾಶ ನೀಡದೆ, ಗೌಪ್ಯತೆ ಮತ್ತು ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಪರೀಕ್ಷೆ ಸಂಬಂಧ ನಡೆದ ಸಿದ್ಧತಾ ಸಭೆಯಲ್ಲಿ ಮಾತನಾಡಿ, ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ. ಪ್ರಶ್ನೆ ಪತ್ರಿಕೆಗಳನ್ನು ಸಂಗ್ರಹಿಸಿಡುವ ತಾಲೂಕು ಖಜಾನೆಗಳಲ್ಲಿ ಹೆಚ್ಚಿನ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಿ. ಅಕ್ರಮ ತಡೆಯಲು ವೆಬ್ ಕಾಸ್ಟಿಂಗ್ ಘಟಕ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಲು ಅಗತ್ಯ ಕ್ರಮವಹಿಸಿ ಎಂದು ತಾಕೀತು ಮಾಡಿದರು.
ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಎನ್.ಆರ್. ತಿಪ್ಪೇಸ್ವಾಮಿ ಮಾತನಾಡಿ, ಜು. 5ರಂದು ಪ್ರಥಮ, 7ರಂದು ವಿಜ್ಞಾನ, 8ರಂದು ದ್ವಿತೀಯ, 9ರಂದು ಗಣಿತ, 10ರಂದು ತೃತೀಯ ಭಾಷೆ ಮತ್ತು ಎನ್‌ಎಸ್‌ಕ್ಯೂಎಫ್, 11ರಂದು ಸಮಾಜ ವಿಜ್ಞಾನ ವಿಷಯದ ಪರೀಕ್ಷೆ ನಡೆಯಲಿದೆ. ಒಟ್ಟು 7,453 ವಿದ್ಯಾರ್ಥಿಗಳು ನೋಂದಣಿಯಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಚಳ್ಳಕೆರೆ-6, ಚಿತ್ರದುರ್ಗ-7, ಹಿರಿಯೂರು-4, ಹೊಸದುರ್ಗ-3, ಹೊಳಲ್ಕೆರೆ ಮತ್ತು ಮೊಳಕಾಲ್ಮೂರು ತಲಾ 2 ಸೇರಿ ಜಿಲ್ಲೆಯಲ್ಲಿ ಒಟ್ಟು 24 ಪರೀಕ್ಷಾ ಕೇಂದ್ರ ಸ್ಥಾಪಿಸಲಾಗಿದೆ. ಎಲ್ಲ ಕೇಂದ್ರಕ್ಕೂ ಮುಖ್ಯ ಅಧೀಕ್ಷಕರು, ಕಸ್ಟೋಡಿಯನ್‌ಗಳ ನೇಮಕ ಮಾಡಲಾಗಿದೆ ಎಂದರು.
ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಜಿಪಂನಲ್ಲಿ ಕೇಂದ್ರಿಕೃತ ವೀಕ್ಷಣಾ ಘಟಕ ಸ್ಥಾಪಿಸಲಾಗಿದೆ. ಇಲ್ಲಿ ನೋಡಲ್ ಅಧಿಕಾರಿಗಳು, ವೀಕ್ಷಕರ ತಂಡ ಕಾರ್ಯನಿರ್ವಹಿಸಲಿದೆ. ತಾಂತ್ರಿಕ ಸಹಾಯಕರನ್ನೂ ನೇಮಿಸಲಾಗಿದೆ. ಲ್ಯಾಪ್‌ಟಾಪ್, ಗಣಕಯಂತ್ರ ಸೌಲಭ್ಯ ಒದಗಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಎಲ್ಲ ಕೊಠಡಿಗಳಲ್ಲೂ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ ಎಂದು ವಿವರಿಸಿದರು.
ಪರೀಕ್ಷಾ ದಿನಗಳಂದು ಸುರಕ್ಷತಾ ಹಿತದೃಷ್ಠಿಯಿಂದ ಕೇಂದ್ರಗಳ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ 144 ಸೆಕ್ಷನ್ ಅನ್ವಯ ನಿಷೇಧಿತ ಪ್ರದೇಶವೆಂದು ಘೋಷಿಸಬೇಕು. ಭದ್ರತೆಗಾಗಿ ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕು. ವಿದ್ಯುತ್ ಅಡಚಣೆಯಾಗದಂತೆ ಸೂಚಿಸಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.
ಡಯಟ್ ಪ್ರಾಚಾರ್ಯ ನಾಸಿರುದ್ದೀನ್, ಶಿಕ್ಷಣಾಧಿಕಾರಿ ಸಿದ್ಧಪ್ಪ, ಆರ್‌ಟಿಒ ಭರತ್ ಎಂ. ಕಾಳೇಸಿಂಘೆ, ಆರು ತಾಲೂಕುಗಳ ಬಿಇಒಗಳು, ಜಿಲ್ಲಾಮಟ್ಟದ ಅಧಿಕಾರಿಗಳು, ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಇದ್ದರು.