

ದಾವಣಗೆರೆ : ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುತ್ತಿರುವ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಶನಿವಾರ ಭೇಟಿ ನೀಡಿದ್ದರು.
ನಗರದ ಸರ್ಕಾರಿ ಪ್ರೌಢಶಾಲೆ, ಸಿದ್ಧಗಂಗಾ ಶಾಲೆ, ಗೋಪನಾಳು, ಬಾತಿ ಗ್ರಾಮದ ಶಾಲೆಗಳಿಗೆ ತೆರಳಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದರು.
ಇಲ್ಲಿನ ಸರ್ಕಾರಿ ಪ್ರೌಢಶಾಲೆ ಕೇಂದ್ರದಲ್ಲಿ ವಿದ್ಯಾರ್ಥಿಗಳನ್ನು ಮಾತನಾಡಿಸಿ ಅವರಿಗೆ ಧೈರ್ಯ ತುಂಬಿದರು. ಕೆಲವು ಕಿವುಡ ಮತ್ತು ಮೂಗ ಮಕ್ಕಳೂ ಪರೀಕ್ಷೆ ಬರೆಯುವುದನ್ನು ಗಮನಿಸಿದರು. ಕೇಂದ್ರದ ಆವರಣದಲ್ಲಿದ್ದ ಎನ್‌ಸಿಸಿ ಅಧಿಕಾರಿಗಳ ಜತೆಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ 93 ಪರೀಕ್ಷಾ ಕೇಂದ್ರಗಳಿವೆ. ಅಂಧ ಹಾಗೂ ಮೂಗ ಮಕ್ಕಳು ಪರೀಕ್ಷೆ ಬರೆಯುವ ಪರಿ ನೋಡಿ ನನ್ನ ಆತ್ಮವಿಶ್ವಾಸ ಹೆಚ್ಚಾಗಿದೆ ಎಂದರು.
ಪರಸ್ಪರ ಅಂತರ ಕಾಪಾಡಿಕೊಂಡು ಗೊಂದಲ ಆಗದಂತೆ ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗಿದೆ ಎಂದು ತಿಳಿಸಿದರು.
ಕಂಟೇನ್ಮೆಂಟ್ ವಲಯದ ವಿದ್ಯಾರ್ಥಿಗಳಿಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಇಬ್ಬರು ಎನ್.ಸಿ.ಸಿ.ಯವರನ್ನು ನಿಯೋಜಿಸಲಾಗಿದೆ. ರೆಡ್‌ಕ್ರಾಸ್, ಸ್ಕೌಟ್ಸ್ ಮತ್ತು ಗೈಡ್ಸ್‌ನವರು ನೆರವಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಪರೀಕ್ಷಾ ಕೇಂದ್ರದ ಸುತ್ತಮುತ್ತ ಕಟ್ಟುನಿಟ್ಟಿನ ವ್ಯವಸ್ಥೆ ಮಾಡಲಾಗಿದೆ. ಬಹಳಷ್ಟು ದೂರದಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ಇದರಿಂದಾಗಿ ಪಾಲಕರು ಹಾಗೂ ಬೇರೆ ಯಾರೂ ಒಳಗೆ ಬರುವ ಮತ್ತು ಹೊರಗೆ ಹೋಗುವ ಸಮಸ್ಯೆ ಆಗಿಲ್ಲ.
ಶಿಕ್ಷಣ ಸಚಿವರ ಆದೇಶದಂತೆ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯುದಂತೆ ಯಶಸ್ವಿಯಾಗಿ ಪರೀಕ್ಷೆ ನಡೆಯುತ್ತಿದೆ ಎಂದು ಹೇಳಿದರು. ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ, ಬಿ.ಇ.ಒ. ಸಿದ್ದಪ್ಪ ಇದ್ದರು.