

ಚಿತ್ರದುರ್ಗ: ಪ್ರಸಕ್ತ ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆಗಳ ಫಲಿತಾಂಶದಲ್ಲಿ ಗಣನೀಯ ಸಾಧನೆಗೆ ಅಗತ್ಯ ಕಾರ‌್ಯಕ್ರಮಗಳನ್ನು ಈಗಿನಿಂದಲೇ ರೂಪಿಸುವಂತೆ ಜಿಪಂ ಸಿಇಒ ಎಸ್.ಜೆ. ಸೋಮಶೇಖರ್ ಶಿಕ್ಷಣ ಮತ್ತು ಪಪೂ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಜಿಪಂ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, 2022-23ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದ ಚಿತ್ರದುರ್ಗ ಜಿಲ್ಲೆ, 2023-24ನೇ ಸಾಲಿನಲ್ಲಿ 21ನೇ ಸ್ಥಾನಕ್ಕೆ ಕುಸಿದಿದೆ. ಈ ಪ್ರಮಾಣದ ಫಲಿತಾಂಶದ ಕುಸಿತಕ್ಕೆ ಕಾರಣ ಏನು ಎಂದು ಪ್ರಶ್ನಿಸಿದರು.
ಪ್ರಸ್ತಕ ಶೈಕ್ಷಣಿಕ ವರ್ಷ ಆರಂಭವಾಗಿದ್ದು, ಫಲಿತಾಂಶ ಸುಧಾರಣೆಗೆ ಎಲ್ಲ ಪ್ರಯತ್ನಗಳನ್ನೂ ತಕ್ಷಣದಿಂದ ಪ್ರಾರಂಭಿಸಬೇಕು. ಶಾಲೆ, ಹೋಬಳಿ, ತಾಲೂಕು ಮತ್ತು ಜಿಲ್ಲಾ ಹಂತಗಳಲ್ಲಿ ಫಲಿತಾಂಶ ವೃದ್ಧಿಗೆ ವೈವಿಧ್ಯ ಶೈಕ್ಷಣಿಕ ಚಟುವಟಿಕೆಗಳನ್ನು ಸಕ್ರಿಯವಾಗಿ ರೂಪಿಸಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಶಾಲಾ ಹಂತದಲ್ಲಿ ವಿಷಯವಾರು ಮೇಲ್ವಿಚಾರಣೆ ನಡೆಸಬೇಕು. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಳ ಮೇಲೇ ನಿಗಾವಹಿಸಿ ಫಲಿತಾಂಶ ಸುಧಾರಣೆಗೆ ಅಧಿಕಾರಿಗಳು, ಶಿಕ್ಷಕರು ಅಗತ್ಯ ಕ್ರಮ ವಹಿಸಬೇಕು ಎಂದರು.
ದ್ವಿತೀಯ ಪಿಯು ಪರೀಕ್ಷೆಯಲ್ಲೂ ಜಿಲ್ಲೆ ಕಳಪೆ ಫಲಿತಾಂಶ ಪಡೆದಿದೆ ಎಂದೂ ಅಸಮಾಧಾನ ವ್ಯಕ್ತಪಡಿಸಿದ ಸೋಮಶೇಖರ್, ಫಲಿತಾಂಶ ಸುಧಾರಣೆಗೆ ಪೂರಕ ಕ್ರಮಗಳನ್ನು ತೆಗೆದುಕೊಳ್ಳ ಬೇಕು. ಕಳಪೆ ಫಲಿತಾಂಶದ ಕಾಲೇಜುಗಳನ್ನು ಗುರುತಿಸಿ, ಸುಧಾರಣೆಗೆ ಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಜಿಪಂ ಉಪ ಕಾರ್ಯದರ್ಶಿ ಕೆ. ತಿಮ್ಮಪ್ಪ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಂ.ನಾಸಿರುದ್ದೀನ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಆರ್. ಪುಟ್ಟಸ್ವಾಮಿ, ಚಿತ್ರದುರ್ಗ ಬಿಇಒ ಎಸ್. ನಾಗಭೂಷಣ್, ಹಿರಿಯೂರು ಬಿಇಒ ತಿಪ್ಪೇಸ್ವಾಮಿ ಸೇರಿ ವಿವಿಧ ತಾಲೂಕುಗಳ ಬಿಇಒಗಳು ಹಾಗೂ ಇಲಾಖೆಗಳ ಅಧಿಕಾರಿಗಳಿದ್ದರು.