ಎಸ್ಸೆಸ್ಸೆಲ್ಸಿ ಇಂಗ್ಲಿಷ್ ಪರೀಕ್ಷೆಗೆ 688 ವಿದ್ಯಾರ್ಥಿಗಳು ಗೈರು

25CBP1dcvisitingsslc
Published on

ಚಿಕ್ಕಬಳ್ಳಾಪುರ: ಕರೊನಾ ತಡೆ ಮುಂಜಾಗ್ರತಾ ಕ್ರಮಗಳ ನಡುವೆ ಗುರುವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಿತು. ಮೊದಲ ದಿನದ ಇಂಗ್ಲಿಷ್ ಪರೀಕ್ಷೆಗೆ 688 ವಿದ್ಯಾರ್ಥಿಗಳು ಗೈರಾಗಿದ್ದರು.

ಜಿಲ್ಲೆಯಲ್ಲಿ ಪರೀಕ್ಷೆಗೆ 16,345 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದು 15,657 ವಿದ್ಯಾರ್ಥಿಗಳು ಆಂಗ್ಲ ಭಾಷೆ ಪರೀಕ್ಷೆ ಬರೆದಿದ್ದಾರೆ. 187 ಮಂದಿ ವಲಸೆ ವಿದ್ಯಾರ್ಥಿಗಳ ಪೈಕಿ ಒಬ್ಬ ಮತ್ತು ಉಳಿದಂತೆ 687 ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.

ಜಿಲ್ಲೆಯ 64 ಕೇಂದ್ರದಲ್ಲಿ ಮುಂಜಾಗ್ರತಾ ಕ್ರಮಗಳೊಂದಿಗೆ ಪರೀಕ್ಷೆ ನಡೆಯಿತು. ಬಹುತೇಕ ವಿದ್ಯಾರ್ಥಿಗಳು ಬೆಳಗ್ಗೆ 7.30ಕ್ಕೆ ಕೇಂದ್ರದ ಬಳಿ ಹಾಜರಿದ್ದರು. ಥರ್ಮಲ್ ಸ್ಕ್ರೀನಿಂಗ್ ಬಳಿಕ ಪರೀಕ್ಷಾ ಕೇಂದ್ರಗಳಲ್ಲಿ ನಿಗದಿಪಡಿಸಿದ ಸ್ಥಳಕ್ಕೆ ತೆರಳಿ ಕೊನೇ ಕ್ಷಣದ ಓದಿನ ಕಸರತ್ತು ನಡೆಸಿದ್ದರು. ಇನ್ನು ಆತಂಕದಲ್ಲಿ ಬಹುತೇಕ ಪಾಲಕರು ಕೇಂದ್ರದ ಸುತ್ತಲಿನ ಪ್ರದೇಶದಲ್ಲಿ ಮಕ್ಕಳಿಗಾಗಿ ಕಾಯುತ್ತಿದ್ದ ದೃಶ್ಯ ಕಂಡು ಬಂತು.

10 ಮಂದಿಗೆ ವಿಶೇಷ ಕೊಠಡಿ: ಕಂಟೇನ್ಮೆಂಟ್ ವಲಯದಿಂದ ಬಂದ, ಆರೋಗ್ಯ ಸಮಸ್ಯೆ ಹೊಂದಿದ್ದ 10 ವಿದ್ಯಾರ್ಥಿಗಳು ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆದರು. ಆರೋಗ್ಯದಲ್ಲಿ ಏರುಪೇರು ಸೇರಿ ಹಲವು ಸಮಸ್ಯೆಗಳು ಉದ್ಭವವಾಗುವ ಲೆಕ್ಕಾಚಾರದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ನಿಯೋಜಿಸಲಾಗಿತ್ತು. ಇನ್ನು ಉದ್ಯೋಗಕ್ಕಾಗಿ ವಲಸೆ ಹೋಗಿ, ಮತ್ತೆ ಸ್ವಗ್ರಾಮಕ್ಕೆ ವಾಪಸಾದವರ ಮಕ್ಕಳು ಹಾಜರಾದರು.

ಸಾರಿಗೆ ಸೂಕ್ತ ವ್ಯವಸ್ಥೆ : ಪರೀಕ್ಷಾ ಕೇಂದ್ರಕ್ಕೆ ಬರುವ ವಿದ್ಯಾರ್ಥಿಗಳಿಗಾಗಿ ಸಾರಿಗೆ ಮತ್ತು ಖಾಸಗಿ ಸಂಸ್ಥೆ ಬಸ್ ಸೌಲಭ್ಯ ಒದಗಿಸಲಾಗಿತ್ತು. ವಿದ್ಯಾರ್ಥಿಗಳು ಪರೀಕ್ಷಾ ಪ್ರವೇಶ ಪತ್ರ ತೋರಿಸಿ, ಉಚಿತವಾಗಿ ಪ್ರಯಾಣಿಸಿದರು. ಮತ್ತೊಂದೆಡೆ ಹಲವರು ಪಾಲಕರೊಂದಿಗೆ ನೇರವಾಗಿ ಖಾಸಗಿ ವಾಹನಗಳಲ್ಲಿ ಬಂದರು.

ಡಿಸಿ, ಸಿಇಒ, ಶ್ರೀಗಳ ಭೇಟಿ: ಕರೊನಾ ಆತಂಕದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆರ್.ಲತಾ, ಜಿಪಂ ಸಿಇಒ ಬಿ.ಫೌಜಿಯಾ ತರನ್ನುಮ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಜಿ.ನಾಗೇಶ್, ತಹಸೀಲ್ದಾರ್ ನಾಗಪ್ರಶಾಂತ್ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ, ವ್ಯವಸ್ಥೆ ಪರಿಶೀಲಿಸಿದರು. ಇದರ ನಡುವೆ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಬಿಜಿಎಸ್ ಶಾಲೆಗೆ ಆಗಮಿಸಿ, ಮಕ್ಕಳಿಗೆ ಧೈರ್ಯ ತುಂಬಿದರು. ಇನ್ನು ಮುಂಜಾಗ್ರತಾ ಕ್ರಮವಾಗಿ ಎಲ್ಲ ಪರೀಕ್ಷಾ ಕೇಂದ್ರದಲ್ಲಿ ಬೆಳಗ್ಗೆಯೇ ಸ್ಯಾನಿಟೈಸ್ ಮಾಡಿ, ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿತ್ತು.

ಎಸ್ಸೆಸ್ಸೆಲ್ಸಿ ಆಂಗ್ಲ ಭಾಷೆಯ ಮೊದಲ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ. ಎಲ್ಲೂ ಸಮಸ್ಯೆ ಕಂಡು ಬಂದಿಲ್ಲ. ನೋಂದಾಯಿಸಿಕೊಂಡ 16,356 ವಿದ್ಯಾರ್ಥಿಗಳ ಪೈಕಿ 15,670 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಎಸ್.ಜಿ.ನಾಗೇಶ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net