ಎಸ್‌ಸಿಪಿ, ಟಿಎಸ್‌ಪಿ ಹಣ ದುರ್ಬಳಕೆ:  ಬಿ.ಶ್ರೀರಾಮುಲು ಕಿಡಿ

12 SRIRAMULU 02
Published on

ಮೈಸೂರು: ಎಸ್‌ಸಿಪಿ ಮತ್ತು ಟಿಎಸ್‌ಪಿ ಅನುದಾನವನ್ನು ರಾಜ್ಯ ಸರ್ಕಾರವು ನುಂಗಿದ್ದು, ಇದು ದಲಿತರಿಗೆ ಮಾಡಿದ ಅನ್ಯಾಯವಾಗಿದೆ. ಎಸ್‌ಸಿ-ಎಸ್‌ಟಿ ಸಮುದಾಯಕ್ಕೆ ಮೀಸಲಾಗಿರುವ ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಕಿಡಿಕಾರಿದರು.

ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಕಾಯ್ದಿರಿಸಿರುವ ಶೇ.24ರಷ್ಟು ಹಣವನ್ನು ರಾಜ್ಯ ಸರ್ಕಾರವು ಅನ್ಯ ಉದ್ದೇಶಕ್ಕೆ ವಿನಿಯೋಗಿಸಿದೆ. 2023-24ರಲ್ಲಿ 11 ಸಾವಿರ ಕೋಟಿ ರೂ., 2024-25ರಲ್ಲಿ 14 ಸಾವಿರ ಕೋಟಿ ರೂ. ಸೇರಿದಂತೆ ಸುಮಾರು 25 ಸಾವಿರ ಕೋಟಿ ರೂ. ಗಳನ್ನು ಬೇರೆ ಉದ್ದೇಶಕ್ಕೆ ಬಳಸಿಕೊಂಡಿದೆ. ಪರಿಣಾಮ ತಳ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಜತೆಗೆ, ಎಸ್‌ಸಿಪಿ-ಟಿಎಸ್‌ಪಿ ಕಾಯ್ದೆಯನ್ನೇ ರಾಜ್ಯ ಸರ್ಕಾರವು ಗಾಳಿಗೆ ತೂರಿದೆ ಎಂದು  ಸುದ್ದಿಗೋಷ್ಠಿಯಲ್ಲಿ ದೂರಿದರು.

ಕಳೆದ ಮೂರು 3 ವರ್ಷಗಳಿಂದ ಪರಿಶಿಷ್ಟ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್, ವಿದ್ಯಾರ್ಥಿವೇತನ ನೀಡಿಲ್ಲ. ದಲಿತ ಕೇರಿಯಲ್ಲಿ ಮೂಲಸೌಕರ್ಯ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ವಿದೇಶದಲ್ಲಿ ಕಲಿಯಲು ವಿದ್ಯಾರ್ಥಿವೇತನ, ಗಂಗಕಲ್ಯಾಣ ಯೋಜನೆಯಡಿ ಕೊಳವೆಬಾವಿ ಸೌಲಭ್ಯ ಕಲ್ಪಿಸಿಕೊಟ್ಟಿಲ್ಲ ಎಂದು ಆರೋಪಿಸಿದರು.

ಎಲ್ಲ ನಿಗಮ-ಮಂಡಳಿಗಳ ಹಣ ಖಾಲಿ ಮಾಡಲಾಗಿದೆ. ಸರ್ಕಾರದ ಬೊಕ್ಕಸವೂ ಬರಿದಾಗಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಈ ಮೂಲಕ ಜನರನ್ನು ಭಿಕ್ಷುಕರನ್ನಾಗಿಸಿದೆ. ಕೆಳಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ಸರ್ಕಾರ ವರ್ತಿಸುತ್ತಿದೆ. ರಾಜ್ಯ ಸರ್ಕಾರದ ಜನವಿರೋಧಿ ನಿಲುವಿನ ವಿರುದ್ಧ ಬೃಹತ್ ಜನಾಂದೋಲನ ರೂಪಿಸಲಾಗುವುದು ಎಂದರು.

ಗ್ಯಾರಂಟಿ ಯೋಜನೆ ಹೆಸರಿನಲ್ಲಿ ಜನರನ್ನು ಯಾಮಾರಿಸುತ್ತಿದೆ. ರಾಜ್ಯ ಸರ್ಕಾರದ ಈ ನಾಟಕ ಕಂಪನಿ ಬಹಳ ದಿನ ನಡೆಯುವುದಿಲ್ಲ. ಗ್ಯಾರಂಟಿ ಯೋಜನೆ ವಿರುದ್ಧ ನಾವಿಲ್ಲ. ಇದರಿಂದ ಜನರಿಗೆ ಅನುಕೂಲವಾದರೆ ಒಳ್ಳೆಯದು. ಆದರೆ, ತೆರಿಗೆ ಏರಿಕೆ, ದರ ಹೆಚ್ಚಳದ ಮೂಲಕ ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಿಂದ ಕಿತ್ತುಕೊಳ್ಳುತ್ತಿದೆ. ಬಜೆಟ್ ಮಂಡನೆ ವೇಳೆ ಗ್ಯಾರಂಟಿ ಯೋಜನೆಗೆ ಪ್ರತ್ಯೇಕವಾಗಿ ಹಣ ಮೀಸಲಿಡಿ. ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಮೀಸಲಿಡುವ ಹಣವನ್ನು ಗ್ಯಾರಂಟಿಗೆ ಬಳಸಿಕೊಳ್ಳಬೇಡಿ ಎಂದು ಆಗ್ರಹಿಸಿದರು.

ಕಲಿಗಾಲದಲ್ಲಿ ರಾಕ್ಷಸರಿಗೆ ಅವಕಾಶ ಸಿಗುತ್ತಿದೆ. ಸತ್ಯವಂತರಿಗೆ ಅವಕಾಶ ಸಿಗುತ್ತಿಲ್ಲ. ಗ್ಯಾರಂಟಿ ಹಣವನ್ನು ಚುನಾವಣೆ ಬಂದಾಗ ಹಾಕ್ತಾರೆ. ಕಳೆದ 5 ತಿಂಗಳಿಂದ ಗೃಹಲಕ್ಷ್ಮಿ ಯೋಜನೆ ಹಣ ಹಾಕಿಲ್ಲ. ಪ್ರತಿ ತಿಂಗಳು ಹಣ ಹಾಕಬೇಕು. ಆದರೆ, ಮುಂದಿನ ದಿನಗಳಲ್ಲಿ ಬರುವ ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಹಣ ಹಾಕಬಹುದು ಎಂದು ಟೀಕಿಸಿದರು.

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನುದಾನ ಬಿಡುಗಡೆಯಲ್ಲಿ ತಾರತಮ್ಯವಾಗಿಲ್ಲ. ಪ್ರಧಾನಿಯಾಗಿದ್ದ ನೆಹರೂ ಅವರಿಂದ ಹಿಡಿದು ಮನಮೋಹನ್ ಸಿಂಗ್ ಆಡಳಿತಾವಧಿಯವರೆಗೂ ರಾಜ್ಯಕ್ಕೆ ಎಷ್ಟು ಅನುದಾನ ಬಿಡುಗಡೆಯಾಗಿದೆ? ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಷ್ಟು ಅನುದಾನ ಬಿಡುಗಡೆಯಾಗಿದೆ ಎಂಬ ದಾಖಲೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.

ಜನರನ್ನು ಮೂರ್ಖರನ್ನಾಗಿ ಮಾಡುವ ಕೆಲಸ ನಾವು ಮಾಡಿಲ್ಲ. ನಾವು ಕೊಟ್ಟ ಮಾತಿನಂತೆ ನಡೆದುಕೊಳ್ಳುವವರು. ಸುಳ್ಳನ್ನು ಸತ್ಯ ಮಾಡಿ ಅಧಿಕಾರ ಹಿಡಿದಿದ್ದಾರೆ. ಸತ್ಯ, ಸುಳ್ಳಿನ ಬಗ್ಗೆ ಜನರೇ ಮುಂದಿನ ದಿನಗಳಲ್ಲಿ ತೀರ್ಮಾನ ಮಾಡ್ತಾರೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net