ಮೈಸೂರು: ಎಸ್‌ಸಿಪಿ, ಟಿಎಸ್‌ಪಿ ಅನುದಾನದ ಪೈಕಿ 11 ಸಾವಿರ ಕೋಟಿ ರೂ. ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಿಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ಖಂಡನೀಯ. ಇದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ವಿರೋಧಿಯಾಗಿದೆ ಎಂದು ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ಬಿ.ಆರ್.ಪುಟ್ಟಸ್ವಾಮಿ ಕಿಡಿಕಾರಿದರು.
ಈ ಹಣವನ್ನು ಎಸ್ಸಿ-ಎಸ್ಟಿ ಕುಟುಂಬಗಳಿಗೆ ಬಳಸಿ ತಲಾ ಐದು ಲಕ್ಷ ರೂ. ಮನೆ ನಿರ್ಮಿಸಿಕೊಳ್ಳಲು ನೀಡಿದ್ದಲ್ಲಿ ಸುಮಾರು 11 ಲಕ್ಷ ಜನರಿಗೆ ವಸತಿ ಸಮಸ್ಯೆ ಬಗೆಹರಿಯುತ್ತಿತ್ತು. ಅಥವಾ ಈ ಸಮುದಾಯದ ನಿರುದ್ಯೋಗಿಗಳಿಗೆ ಉದ್ದಿಮೆ ನಡೆಸಲು 5 ಲಕ್ಷ ರೂ., ನೀಡಿದ್ದಲ್ಲೂ 2 ಲಕ್ಷ ಕುಟುಂಬಗಳು ಸ್ವಾವಲಂಬನೆಯಾಗುತ್ತಿದ್ದವು. ಹಾಗೆ ಮಾಡದ ಕಾಂಗ್ರೆಸ್ ಸರ್ಕಾರವು ಪರಿಶಿಷ್ಟರನ್ನು ವಂಚಿಸಿದೆ ಎಂದು ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಕಾಂಗ್ರೆಸ್ ಸರ್ಕಾರವು ಕೂಡಲೇ 7ಡಿ ಕಲಂ ರದ್ದುಪಡಿಸಿ 11 ಸಾವಿರ ಕೋಟಿ ರೂ. ಯಾವುದೇ ಬಾಬ್ತುಗಳಿಗೆ ವರ್ಗಾವಣೆ ಮಾಡಬಾರದು. ವಾರ್ಷಿಕ ಬಜೆಟ್‌ನಲ್ಲಿ ಈ ವರ್ಗಗಳಿಗೆ ಮೀಸಲಿಟ್ಟ 34 ಸಾವಿರ ಕೋಟಿ ರೂ., ಅನುದಾನವನ್ನು ಮಾಸಿಕ ಕಂತುಗಳಲ್ಲಿ ಈ ವರ್ಗದ ಕುಟುಂಬಗಳಿಗೆ ವೈಯಕ್ತಿಕ ಅಭಿವೃದ್ಧಿಗೆ ಪೂರಕವಾಗಿ ಯೋಜನೆಗಳಿಗೆ ಬಳಸಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಪುಟ್ಟಬಸವಯ್ಯ, ಚಂದ್ರಶೇಖರಯ್ಯ, ಶ್ರೀಕಂಠು, ಬಿ. ಮಹದೇವಸ್ವಾಮಿ, ರಂಗದಾಸಿ ಇದ್ದರು