ಎಸ್‌ಸಿಎಸ್‌ಪಿ-ಟಿಎಸ್‌ಪಿ ಅನುದಾನ ತಡೆಗೆ ಖಂಡಿಸಿ ಮೈಸೂರು ವಿವಿ ಸಂಶೋಧಕರ ಸಂಘದಿಂದ ಪ್ರತಿಭಟನೆ

mysore
Published on

ಮೈಸೂರು: ದಲಿತ ಸಂಶೋಧನಾ ವಿದ್ಯಾರ್ಥಿಗಳಿಗೆ ಪ್ರತಿವರ್ಷ ನೀಡುತ್ತಿದ್ದ ಎಸ್‌ಸಿಎಸ್‌ಪಿ-ಟಿಎಸ್‌ಪಿ ಅನುದಾನವನ್ನು ಪ್ರಸಕ್ತ ಸಾಲಿನಿಂದ ತಡೆ ಹಿಡಿದಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಮೈಸೂರು ವಿಶ್ವವಿದ್ಯಾಲಯ ಸಂಶೋಧಕರ ಸಂಘದ ವತಿಯಿಂದ ಮಾನಸಗಂಗೋತ್ರಿಯ ಅಂಬೇಡ್ಕರ್ ಪ್ರತಿಮೆ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಯಿತು.

ಈ ಸಂಬಂಧ ಸಮಾಜ ಕಲ್ಯಾಣ ಇಲಾಖೆ ಹೊರಡಿಸಿದ್ದ ಆದೇಶ ಪ್ರತಿಯನ್ನು ಪ್ರತಿಭಟನಾಕಾರರು ಹರಿದು ಹಾಕಿ, ಘೋಷಣೆ ಕೂಗಿ ಆಕ್ರೋಶವ್ಯಕ್ತಪಡಿಸಿದರು.

ದಲಿತ ಸಂಶೋಧನಾ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವು ನೀಡುತ್ತಿದ್ದ ಎಸ್‌ಸಿಎಸ್‌ಪಿ-ಟಿಎಸ್‌ಪಿ ಅನುದಾನವನ್ನು ಈ ಸಾಲಿನಿಂದ ತಡೆ ಹಿಡಿದು ಹೊಸ ಆದೇಶವನ್ನು ಹೊರಡಿಸಿದ್ದು, ಹೊಸ ಆದೇಶವು ಅವೈಜ್ಞಾನಿಕ ಮತ್ತು ದಲಿತ ವಿದ್ಯಾರ್ಥಿಗಳನ್ನು ಹತ್ತಿಕ್ಕುವ ಹುನ್ನಾರ ಅಡಗಿದೆ ಎಂದು ದೂರಿದ ಪ್ರತಿಭಟನಾಕಾರರು, ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ವಿರುದ್ಧ ಧಿಕ್ಕಾರ ಕೂಗಿ ಕಿಡಿಕಾರಿದರು.

ಈ ಅವೈಜ್ಞಾನಿಕ ಆದೇಶವನ್ನು ರದ್ದುಪಡಿಸಿ, ಸಂಶೋಧನಾ ವಿದ್ಯಾರ್ಥಿಗಳಿಗೆ ನ್ಯಾಯಯುತವಾಗಿ ದೊರಕಬೇಕಾದ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.

ಹೊಸ ಆದೇಶವನ್ನು ಹಿಂಪಡೆಯದಿದ್ದರೆ ರಾಜ್ಯಾದ್ಯಂತ ಪ್ರತಿ ವಿಶ್ವವಿದ್ಯಾಲಯಗಳಲ್ಲೂ ಪ್ರತಿಭಟನೆ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು.

ಜು.26ರಂದು ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಎಸ್ಸಿ, ಎಸ್ಟಿ ನೌಕರರು ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಸಮಾಜ ಕಲ್ಯಾಣ ಸಚಿವರ ವಿರುದ್ಧ ಕಪ್ಪುಪಟ್ಟಿ ಪ್ರದರ್ಶನ ಮಾಡಲು ತೀರ್ಮಾನಿಸಲಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಸಂಶೋಧಕರ ಸಂಘದ ಅಧ್ಯಕ್ಷ ಶಿವಶಂಕರ್, ಸದಸ್ಯರಾದ ಕಾರ್ತಿಕ್, ಲಿಂಗರಾಜು, ಪ್ರದೀಪ್ ಮುಮ್ಮಡಿ, ವರಹಳ್ಳಿ ಆನಂದ, ಲಿಂಪನ್ ರಾಜು, ಕಿರಣ್, ನಟರಾಜ್, ಪೇಪರ್ ಬಾಬು, ಶಶಿಕುಮಾರ್, ದೀಪು ಪ್ರಸಾದ್, ವಿಶ್ವಪ್ರಸಾದ್, ಮಲ್ಲೇಶ್, ಶೇಷಣ್ಣ, ಧೀರಜ್, ಯೋಗೇಶ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net