

ತುಮಕೂರು: ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡ ಸಮುದಾಯದ ಸಮಸ್ಯೆಗಳಿಗೆ ತ್ವರಿತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ತಾಲೂಕು ಮಟ್ಟದಲ್ಲಿ ಕುಂದು ಕೊರತೆ ಸಭೆಗಳನ್ನು ಕಡ್ಡಾಯವಾಗಿ ನಡೆಸುವಂತೆ ಜಿಲ್ಲಾಧಿಕಾರಿ ಶುಭಕಲ್ಯಾಣ್ ಎಲ್ಲ ತಾಲೂಕು ತಹಸೀಲ್ದಾರ್ಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ 2025ನೇ ವರ್ಷದ 2ನೇ ತೆಮಾಸಿಕ ಜಿಲ್ಲಾ ಜಾಗೃತಿ ಉಸ್ತುವಾರಿ ಸಮಿತಿ ಸಭೆ ನಡೆಸಿ ಮಾತನಾಡಿದರು.ತಾಲೂಕು ಮಟ್ಟದಲ್ಲಿ ಸಭೆಗಳನ್ನು ನಿರಂತರವಾಗಿ ನಡೆಸುವುದು ಕಡ್ಡಾಯವಾಗಿದ್ದು, ಸಮಸ್ಯೆಗಳನ್ನು ತಹಸೀಲ್ದಾರ್ಗಳ ಹಂತದಲ್ಲಿಯೇ ಪರಿಹರಿಸಬೇಕು ಎಂದರು.
ಜಿಲ್ಲೆಯಲ್ಲಿ ಇದುವರೆಗೆ ಎಸ್ಸಿ, ಎಸ್ಟಿ ಸಮುದಾಯಕ್ಕೆ ಸಂಬಂಧಿಸಿದಂತೆ 403 ದೌರ್ಜನ್ಯ ಮತ್ತು 20 ೋಕ್ಸೋ ಪ್ರಕರಣಗಳು ಬಾಕಿಯಿದ್ದು, ಇವುಗಳನ್ನು ಶೀಘ್ರದಲ್ಲಿ ಇತ್ಯರ್ಥಪಡಿಸಿ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ೋಕ್ಸೋ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತಾಲೂಕು ಮತ್ತು ಗ್ರಾಪಂ ಮಟ್ಟದಲ್ಲಿ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಬೇಕು. ಈಗಾಗಲೇ 330 ಗ್ರಾಪಂಗಳಲ್ಲಿ 210 ಪಂಚಾಯಿತಿಗಳಲ್ಲಿ ಸಭೆ ನಡೆದಿದ್ದು, ಉಳಿದ ಗ್ರಾಪಂಗಳಲ್ಲಿ ಸಭೆ ಆಯೋಜಿಸಬೇಕು ಎಂದರು.ಜಿಲ್ಲೆಯ ಎಲ್ಲ ಅಕ್ಕಿ ಗಿರಣಿಗಳಲ್ಲಿ ಕಾರ್ಮಿಕರ ಸುರಕ್ಷತೆಗಾಗಿ ಅಗತ್ಯವಾದ ಸಾಧನಗಳನ್ನು ಕಡ್ಡಾಯವಾಗಿ ಒದಗಿಸಬೇಕು. ಕಾರ್ಮಿಕ ಇಲಾಖೆ ಅಧಿಕಾರಿಗಳು ಅಕ್ಕಿ ಗಿರಣಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ತಿಳಿಸಿದರು.ಅಪರ ಜಿಲ್ಲಾಧಿಕಾರಿ ಡಾ.ಎನ್. ತಿಪ್ಪೇಸ್ವಾಮಿ ಮಾತನಾಡಿ, ಸಭೆಗೆ ಗೈರಾದ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪಗೆ ಸೂಚನೆ ನೀಡಿದರಲ್ಲದೆ, ಮುಂದಿನ ಸಭೆಗೆ ಸಂಬಂಧಪಟ್ಟ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರುವಂತೆ ತಿಳಿಸಿದರು.
ಹೋಬಳಿ ಮಟ್ಟದಲ್ಲಿ ಅಂಬೇಡ್ಕರ್ ಮತ್ತು ಜಗಜೀವನರಾಂ ಅವರ ಭವನ ಮತ್ತು ಉದ್ಯಾನವನ ನಿರ್ಮಿಸಲು ಪ್ರತಿ ತಾಲೂಕಿನಲ್ಲಿ 10 ಗುಂಟೆ ಸ್ಥಳ ಕಲ್ಪಿಸಿಕೊಡಬೇಕು ಎಂದು ತಹಸೀಲ್ದಾರ್ಗೆ ಸೂಚಿಸಿದರು. ಸಭೆಯಲ್ಲಿ ಚರ್ಚಿಸಲಾದ ವಿಷಯಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ರ್ನಿಲಕ್ಷ ತೋರದೆ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿ.ಗೋಪಾಲ್ ಮಾತನಾಡಿ, ಜಿಲ್ಲೆಯಲ್ಲಿ ಶಾಲಾ ಹಾಗೂ ಕಾಲೇಜು ಹಂತದಲ್ಲಿ ಪ್ರತಿ ತಿಂಗಳು ೋಕ್ಸೋ ಹಾಗೂ ಡ್ರಗ್ಸ್ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಜೀತ ಪದ್ಧತಿ ಸೇರಿ ಇತರ ಎಲ್ಲ ಪ್ರಕರಣಗಳಲ್ಲಿಯೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಪೊಲೀಸ್ ಇಲಾಖೆ ಪ್ರತಿ ತಿಂಗಳು ಜಿಲ್ಲೆಯಲ್ಲಿನ ಎಲ್ಲ ಪೊಲೀಸ್ ಠಾಣೆಗಳಲ್ಲಿ ಎಸ್ಸಿ, ಎಸ್ಟಿ ಸಮುದಾಯದ ಜನರ ಕುಂದುಕೊರತೆ ಸಭೆಗಳನ್ನು ನಡೆಸುತ್ತಿದ್ದು, ದಾಖಲಾಗಿರುವ ಎಲ್ಲ ಪ್ರಕರಣಗಳ ಬಗ್ಗೆ ಹೆಚ್ಚಿನ ಗಮನ ಹರಿಸಿ ತ್ವರಿತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ ಮಾತನಾಡಿ, ಜನವರಿ 1 ರಿಂದ ಮಾ.27ರ ಅಂತ್ಯದವರೆಗೂ ಪರಿಶಿಷ್ಟ ಜಾತಿಯ 51 ದೌರ್ಜನ್ಯ ಪ್ರಕರಣಗಳಲ್ಲಿ 70 ಸಂತ್ರಸ್ತರಿಗೆ 43,75,000ರೂ. ಹಾಗೂ ಪರಿಶಿಷ್ಟ ಪಂಗಡದ 19 ಪ್ರಕರಣಗಳಲ್ಲಿ 20 ಸಂತ್ರಸ್ತರಿಗೆ 12,50,000ರೂ. ಪರಿಹಾರ ಮಂಜೂರು ಮಾಡಲಾಗಿದೆ ಎಂದರು.ಜಿಪಂ ಉಪಕಾರ್ಯದರ್ಶಿ ಸಂಜೀವಪ್ಪ, ಮುಖ್ಯ ಯೋಜನಾಧಿಕಾರಿ ಸಣ್ಣಮಸಿಯಪ್ಪ, ಮಧುಗಿರಿ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ ಇದ್ದರು.