

ಚಿತ್ರದುರ್ಗ: ಜಿಲ್ಲೆಯಲ್ಲಿ ಬೇಡ ಜಂಗಮ ಸಮುದಾಯದವರಿಲ್ಲ. ಹೀಗಾಗಿ ಕೂಲಂಕಷವಾಗಿ ಪರಿಶೀಲಿಸಿ, ಎಸ್ಸಿ ಸರ್ಟಿಫಿಕೇಟ್ ನೀಡಿರುವ ಅಧಿಕಾರಿಗಳ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಎಸ್ಸಿ-ಎಸ್ಟಿ ಸಮುದಾಯದ ವಕೀಲರು ಗುರುವಾರ ಪ್ರತಿಭಟನೆ ನಡೆಸಿದರು.
ಬೇಡ ಜಂಗಮರೆಂದು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಎಸ್ಸಿ ಸಮುದಾಯದ ಮೀಸಲಾತಿ ಕಬಳಿಸುತ್ತಿರುವವರ ವಿರುದ್ಧವೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಬೇಡ ಜಂಗಮರು ಮೂಲತಃ ಆಂಧ್ರ ಪ್ರದೇಶದವರು. ತೆಲುಗು ಮಾತನಾಡುವ ಈ ಸಮುದಾಯ ಅನೇಕ ದಶಕಗಳ ಹಿಂದೆಯೇ ಕರ್ನಾಟಕಕ್ಕೆ ವಲಸೆ ಬಂದಿದ್ದಾರೆ. ಭಿಕ್ಷಾಟನೆಯೊಂದಿಗೆ ಅಲೆಮಾರಿಗಳಾದ ಈ ಸಮುದಾಯ ಕಾಲಕ್ರಮೇಣ ನಶಿಸಿ ಹೋಗಿದೆ. ಜಿಲ್ಲೆಯ ಯಾವ ಭಾಗದಲ್ಲೂ ಇಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿ ಎಸ್ಸಿ ಸಮುದಾಯಕ್ಕೆ ಆಗುವ ಅನ್ಯಾಯ ತಪ್ಪಿಸಬೇಕು ಎಂದು ಕೋರಿದರು.
ವಕೀಲರಾದ ಬೀಸನಹಳ್ಳಿ ಜಯಣ್ಣ, ಬಿ.ಟಿ.ರಾಜಣ್ಣ, ಎಚ್.ರಾಂಬಾಬು, ಎಸ್.ತಿಪ್ಪೇಸ್ವಾಮಿ, ಮಂಜು ಇತರರಿದ್ದರು.