

ಮೈಸೂರು: ಪರಿಶಿಷ್ಟ ಜಾತಿಗಳ ಸಮೀಕ್ಷೆಯಲ್ಲಿ ಭೋವಿ ಸಮುದಾಯಕ್ಕೆ ಅನ್ಯಾಯ ಮಾಡಲಾಗುತ್ತಿದೆ ಎಂದು ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಸಿ.ವಿ.ಸೀತಾರಾಮು ದೂರಿದ್ದಾರೆ.
ಜಾತಿ ಜನಗಣತಿಗೆ ಬರುತ್ತಿರುವ ಗಣತಿದಾರರು ಮೂಲ ಜಾತಿಗಳನ್ನು ಮೊದಲು ಹಾಕಿ ನಂತರ ಉಪಜಾತಿಗಳನ್ನು ಸೇರಿಸುತ್ತಿದ್ದಾರೆ. ಉದಾಹರಣೆಗೆ ಆದಿಕರ್ನಾಟಕ ಎಂದು ನಂ.003 ನಂಬರ್ ಅನ್ನು ಬಳಸಿ ಉಪ ಜಾತಿ 023.1 ಭೋವಿ ಎಂದು ಸುಮಾರು ಕಡೆ ಮಾಡುತ್ತಿದ್ದಾರೆ.
ಇದರಿಂದ ಭೋವಿ ಸಮಾಜಕ್ಕೆ ಅನ್ಯಾಯವಾಗುತ್ತಿದೆ. ಏಕೆಂದರೆ ಆದಿಕರ್ನಾಟಕ, ಆದಿಆಂಧ್ರ, ಆದಿದ್ರಾವಿಡ ಸಹ 101 ಜಾತಿಗಳಲ್ಲಿ ಬರುವ ಜಾತಿಗಳಾಗಿದ್ದು, ಇವುಗಳನ್ನು ಮೂಲ ಜಾತಿ ಎಂದು ಪರಿಗಣಿಸಿ ಉಪಜಾತಿ ಕಾಲಂನಲ್ಲಿ ಭೋವಿ ಜತೆಗೆ ಸುಮಾರು 69 ಉಪಜಾತಿಗಳು ಕಾಲಂನಲ್ಲೇ ಬರುತ್ತಿದ್ದು, ನಮ್ಮ ಸಮಾಜದವರಿಗೆ ಅನ್ಯಾಯವಾಗುತ್ತಿದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಜಾತಿಗಣತಿಯಲ್ಲಿ ಆದಿಕರ್ನಾಟಕ ಎಂದು ನಮೂದಿಸಿ ಅದರಲ್ಲಿ ಉಪಜಾತಿ ಭೋವಿ ಎಂದು ಸಾವಿರಾರು ಸಂಖ್ಯೆಯಲ್ಲಿ ನಮೂದು ಆಗಿರುತ್ತದೆ. ಆ ರೀತಿ ಆಗಿದ್ದರೆ ಅದು ತಪ್ಪಾಗಿರುತ್ತದೆ.
ಈಗ ಆಗಿರುವ ಎಲ್ಲ ಡಾಟಾವನ್ನು ಪರಿಶೀಲಿಸಿ ಅವೆಲ್ಲವೂ ಭೋವಿ ಸಮಾಜಕ್ಕೆ ಸೇರಬೇಕು. ಈ ಕುರಿತು ಉದ್ದೇಶಪೂರ್ವಕವಾಗಿ ಲೋಪ ಎಸಗುತ್ತಿರುವ ಅಧಿಕಾರಿಗಳ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಗಣತಿಗೆ ಬರುವ ಅಧಿಕಾರಿಗಳಿಗೆ ಸಮೀಕ್ಷೆ ಬಗ್ಗೆ ಸರಿಯಾದ ತರಬೇತಿ ಆಗಿಲ್ಲ. ಎಲ್ಲರೂ ದುಡಿಕಿನಿಂದ ಕೆಲಸ ಮಾಡುತ್ತಿದ್ದು, ಮನೆ ಮನೆಗೆ ತೆರಳದೆ ಎಲ್ಲಿಯೋ ಕುಳಿತು ಕೆಲಸ ಮಾಡುತ್ತಿದ್ದಾರೆ. ಗಣತಿ ಕಾರ್ಯ ಮುಗಿಸಲು ಇನ್ನೂ ಹೆಚ್ಚಿನ ಕಾಲಾವಕಾಶ ಅಗತ್ಯ ಇದೆ.
ಈ ಗಣತಿಯಲ್ಲಿ ಕೆಲವು ಅಧಿಕಾರಿಗಳು ಆಯಾಯ ಜಾತಿಗೆ ಸೇರಿದವರಾಗಿರುವುದರಿಂದ ಕೆಲವು ಜಾತಿಗಳಿಗೆ ಅನ್ಯಾಯವಾಗುತ್ತಿದೆ ಎಂಬ ಆರೋಪು ಕೇಳಿಬರುತ್ತಿವೆ. ಇದನ್ನೆಲ್ಲವನ್ನೂ ರಾಜ್ಯ ಸರ್ಕಾರ ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಆಹಾರ ಪಡಿತರ ಚೀಟಿಯಲ್ಲಿ ಕೆಲವು ಲೋಪಗಳಿವೆ. ಹೀಗಾಗಿ, ಇದರ ಬದಲು ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, , ಜಾತಿ ಪ್ರಮಾಣಪತ್ರಗಳನ್ನು ಪರಿಗಣಿಸಬೇಕು. ಮಕ್ಕಳು, ಮನೆ ಬಂದಿರುವ ಸೊಸೆಯಂದಿರು ಬಿಟ್ಟುಹೋಗದ ರೀತಿಯಲ್ಲಿ ಸೇರಿಸಬೇಕು ಎಂದು ಮನವಿ ಮಾಡಿದರು.