

ಶೃಂಗೇರಿ: ಸರ್ಕಾರದ ಆದೇಶದಂತೆ ಎಸ್ಸಿ, ಎಸ್ಟಿ ವರ್ಗದ ವಿದ್ಯುತ್ ಬಳಕೆದಾರರಿಗೆ ಶೇ.75 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುತ್ತಿದ್ದು, ಇಲಾಖೆಗೆ ಸೂಕ್ತ ದಾಖಲಾತಿಗಳನ್ನು ನೀಡಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಕೊಪ್ಪ ಮೆಸ್ಕಾಂ ಎಇಇ ಸಿದ್ದೇಶ್ ಹೇಳಿದರು. ಮೆಣಸೆ ಗ್ರಾಪಂ ವ್ಯಾಪ್ತಿಯ ಮಸಿಗೆ ಸರ್ಕಾರಿ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ವಿದ್ಯುತ್ ಅದಾಲತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯುತ್ ಬಿಲ್ ಹೆಚ್ಚುವರಿ ಬಂದಲ್ಲಿ ಅದನ್ನು ಸರಿಪಡಿಸುವ ಅವಕಾಶವಿದೆ. ಗ್ರಾಪಂಗಳು ಬೆಳಕು ಯೋಜನೆಗಾಗಿ ಫಲಾನುಭವಿಗಳ ಪಟ್ಟಿ ನೀಡಿದರೆ ಸಂಪರ್ಕ ಕಲ್ಪಿಸಲಾಗುವುದು ಎಂದರು.
ಮೆಸ್ಕಾಂ ಅಧಿಕಾರಿ ಲಿಂಗಣ್ಣ ವಿದ್ಯುತ್ ಸುರಕ್ಷತೆ ಕುರಿತು ಮಾತನಾಡಿ, ವಿದ್ಯುತ್ ಉಪಕರಣಗಳನ್ನು ಮುಟ್ಟುವಾಗ ಎಚ್ಚರದಿಂದ ಇರಬೇಕು. ಮೂರು ವರ್ಷಕೊಮ್ಮೆ ವಿದ್ಯುತ್ ಸಂಪರ್ಕದ ಲೈನ್ಗಳ ಪರಿಶೀಲಿಸುವುದು ಅಗತ್ಯವಿದೆ ಎಂದರು. ಕೃಷಿಕ ಆದಿತ್ಯ ಶೆಟ್ಟಿಹಳ್ಳಿ ಮಾತನಾಡಿ, ನಮ್ಮ ಊರಿಗೆ ಸಂಪರ್ಕ ಕಲ್ಪಿಸುವ ವಿದ್ಯುತ್ ಮಾರ್ಗವು ದಟ್ಟ ಕಾಡಿನ ನಡುವೆ ಬಂದು ರಂಬೆ-ಕೊಂಬೆಗಳು ತಗುಲಿ ಕಂಬಗಳು ವಾಲಿ ನಿಂತಿವೆ. ಮರದ ವಿದ್ಯುತ್ ಕಂಬಗಳು ಶಿಥಿಲಗೊಂಡಿದ್ದು, ಇಲಾಖೆ ಕೂಡಲೇ ಕಂಬ ಬದಲಾವಣೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಗೃಹಿಣಿ ಸುನಂದಾ ಶ್ರೀನಿವಾಸ್ ಕಾನುವಳ್ಳಿ ಮಾತನಾಡಿ, ಮನೆ ಸಮೀಪವಿರುವ ಲೈನ್ ಬದಲಾಯಿಸಿಕೊಡುವಂತೆ ಹಲವು ಬಾರಿ ಗ್ರಾಪಂ ಹಾಗೂ ಮೆಸ್ಕಾಂಗೆ ಮನವಿ ಮಾಡಿದರೂ ಯಾರೂ ಸ್ಪಂದಿಸಿಲ್ಲ. ಅವಘಡ ಸಂಭವಿಸುವ ಮೊದಲು ಇಲಾಖೆ ಎಚ್ಚೆತ್ತುಕೊಳ್ಳುವ ಅಗತ್ಯವಿದೆ ಎಂದರು.
ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಕೆ.ಎಂ.ಗೋಪಾಲ್ ಮಾತನಾಡಿ, ಮಸಿಗೆ ಗ್ರಾಮದ ಸೂಡ್ರಿಯಲ್ಲಿ ಪ.ಜಾತಿಯ 20 ಜನರ ತೋಟವಿದೆ. ತೋಟಕ್ಕೆ ನೀರು ಹರಿಸಲು ವಿದ್ಯುತ್ ಸಂಪರ್ಕ ಅಗತ್ಯವಿದೆ. ಸಮಾಜಕಲ್ಯಾಣ ಇಲಾಖೆ ಎಸ್ಇಪಿ ಯೋಜನೆಯಲ್ಲಿ ಸಂಪರ್ಕ ನೀಡಬೇಕು ಎಂದು ಆಗ್ರಹಿಸಿದರು.