

ಚಿತ್ರದುರ್ಗ: ನಗರಕ್ಕೆ ಶನಿವಾರ ಭೇಟಿ ನೀಡಿದ್ದ ನಾಗರಿಕ ಹಕ್ಕು ಜಾರಿ ನಿದೇರ್ಶನಾಲಯದ(ಡಿಸಿಆರ್‌ಇ)ಎಡಿಜಿಪಿ ಅರುಣ್‌ಚಕ್ರವರ್ತಿ ಅವರು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿರುದ್ಧದ ದೌರ್ಜನ್ಯ ಪ್ರಕರಣಗಳ ಕೂಲಂಕಶ ತನಿಖೆ, ಪ್ರಕರಣದ ತಪ್ಪಿತಸ್ಥರನ್ನು ತ್ವರಿತಗತಿಯಲ್ಲಿ ಶಿಕ್ಷಿಸುವ ನಿಟ್ಟಿನಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯಂದು ರಾಜ್ಯಾದ್ಯಂತ ಕಾರ್ಯಾರಂಭ ಮಾಡಿರುವ 33 ವಿಶೇಷ ಪೊಲೀಸ್ ಠಾಣೆಗಳ ಕಾರ್ಯನಿರ್ವಹಣೆ ಕುರಿತಂತೆ ವಿವರಿಸಿದರು.
ವಿಶೇಷ ಪೊಲೀಸ್ ಠಾಣೆಗಳ ಕಾರ್ಯವೈಖರಿ, ಈ ಠಾಣಾಧಿಕಾರಿಗಳ ಕರ್ತವ್ಯ, ದೌರ್ಜನ್ಯ ಪ್ರಕರಣಗಳು ದಾಖಲಾದ ಸಂದರ್ಭ ಇತರೆ ಠಾಣೆಗಳ ಅಧಿಕಾರಿಗಳು ನಿರ್ವಹಿಸಬೇಕಾದ ಕರ್ತವ್ಯಗಳ ಮಾಹಿತಿ ನೀಡಿದರು. ಪರಿಶಿಷ್ಟರ ಮೇಲಿನ ದೌರ್ಜನ್ಯಗಳನ್ನು ನಿಗ್ರಹಿಸುವಲ್ಲಿ ವಿಶೇಷ ಠಾಣೆಗಳು ವಹಿಸಲಿರುವ ಮಹತ್ವದ ಪಾತ್ರ ಕುರಿತಂತೆ ತಿಳಿಸಿದರು.
ಈ ವೇಳೆ ಅವರು ಎಸ್‌ಪಿ ಕಚೇರಿ ಅವರಣದಲ್ಲಿರುವ ಅಪರಾಧ ಸ್ಥಳ ಪರಿಶೀಲನಾ ಅಧಿಕಾರಿಗಳ ಕಚೇರಿ ಹಾಗೂ ಹೊಸದಾಗಿ ನಗರ ದಲ್ಲಿ ಆರಂಭವಾಗಿರುವ ಡಿಸಿಆರ್‌ಇ ವಿಶೇಷ ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಶೀಲಿಸಿದರು.
ಎಸ್‌ಪಿ ರಂಜಿತ್‌ಕುಮಾರ್ ಬಂಡಾರು, ದಾವಣಗೆರೆ ಡಿಸಿಆರ್‌ಇ ಎಸ್‌ಪಿ ಶ್ರೀಧರ್, ಡಿವೈಎಸ್‌ಪಿಗಳಾದ ಟಿ. ರಾಜಣ್ಣ, ಶಿವಕುಮಾರ್, ಪಿ.ಕೆ. ದಿನಕರ್, ಡಿಎಆರ್ ಡಿವೈಎಸ್‌ಪಿ ಶ್ರೀನಿವಾಸ್, ಅಪರಾಧ ಸ್ಥಳ ಪರಿಶೀಲನಾ ಅಧಿಕಾರಿಗಳಾದ ಗುರುರಾಜ ಚಿಕ್ಕಮಠ, ದೀಪಾ ಹಂಪಣ್ಣನವರ್, ರಂಜಾನಖಾನ್ ಪಠಾಣ್, ಜಿಲ್ಲೆಯ ವಿವಿಧ ಠಾಣೆಗಳ ಪಿಐ, ಸಿಪಿಐ ಹಾಗೂ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್‌ಗಳು ಇದ್ದರು.