ಎಸ್‌ಸಿ, ಎಸ್‌ಟಿ ದುರುಪಯೋಗ ಖಂಡಿಸಿ ಬಿಎಸ್‌ಪಿಯಿಂದ ನಾಳೆ ಪ್ರತಿಭಟನೆ

ಎಸ್‌ಸಿ, ಎಸ್‌ಟಿ ದುರುಪಯೋಗ ಖಂಡಿಸಿ ಬಿಎಸ್‌ಪಿಯಿಂದ ನಾಳೆ ಪ್ರತಿಭಟನೆ
Published on

ಹಾಸನ: ಎಸ್ಸಿ, ಎಸ್ಟಿ ಕಲ್ಯಾಣಕ್ಕಾಗಿ ಮೀಸಲಿರಿಸಿದ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಿಕೊಂಡಿರುವ ರಾಜ್ಯ ಸರ್ಕಾರದ ವಿರುದ್ಧ ಜು. 26ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಬಿಎಸ್‌ಪಿ ರಾಜ್ಯ ಉಪಾಧ್ಯಕ್ಷ ಗಂಗಾಧರ್ ಬಹುಜನ ಹೇಳಿದರು.
ಆಗಸ್ಟ್ 14ರವರೆಗೆ ನಮ್ಮ ಈ ಪ್ರತಿಭಟನೆ ಮುಂದುವರಿಯುತ್ತದೆ. ಕಳೆದ ಆರು ತಿಂಗಳಿಂದ ರಾಜ್ಯದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ವಾಲ್ಮೀಕಿ ನಿಗಮಕ್ಕೆ ನಿಗದಿಯಾಗಿದ್ದ 187 ಕೋಟಿ ರೂ.ಗಳಲ್ಲಿ 90 ಕೋಟಿಯನ್ನು ಅಕ್ರಮವಾಗಿ ಬೇರೆ ಖಾತೆಗಳಿಗೆ ವರ್ಗಾಯಿಸಲಾಗಿದೆ. ಕೋಟಿಗಟ್ಟಲೇ ಹಣ ಹಗಲು ದರೋಡೆ ಆಗಿರುವುದನ್ನು ನಂಬಲು ಆಗುತ್ತಿಲ್ಲ. ನಕಲಿ ಖಾತೆಗಳನ್ನು ಸೃಷ್ಟಿಸಿ ವರ್ಗಾಯಿಸಿರುವುದು ಘೋರ ಅಪರಾಧ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಚುನಾವಣೆಗೆ ಮದ್ಯ ಖರೀದಿಗಾಗಿ ಹಣ ಬಳಸಿಕೊಂಡಿದ್ದಾರೆ. ಮುಡಾ ಹಗರಣ ಬಯಲಿಗೆ ಬರುತ್ತಿದ್ದಂತೆ ಎಚ್ಚೆತ್ತ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ 21 ಹಗರಣ ಬಯಲಿಗೆ ಎಳೆದಿದ್ದಾರೆ. ಎರಡೂ ಪಕ್ಷದವರು ಭ್ರಷ್ಟರೇ ಆಗಿದ್ದಾರೆ. ಬಿಜೆಪಿಯ ಭ್ರಷ್ಟಾಚಾರಕ್ಕೆ ಬೇಸತ್ತು ಕಾಂಗ್ರೆಸ್ ಗೆಲ್ಲಿಸಿದ್ದೇವೆ. ಈಗ ಅವರು ಕೋಟಿ ಕೋಟಿ ಭ್ರಷ್ಟಾಚಾರ ಮಾಡುತ್ತಿರುವುದು ಬೇಸರ ತರಿಸಿದೆ. ಇದುವರೆಗೆ ಎಸ್ಸಿ, ಎಸ್‌ಟಿಗೆ ಮೀಸಲಿಟ್ಟಿದ್ದ ಸಾವಿರಾರು ಕೋಟಿ ರೂ. ಕೊಳ್ಳೆ ಹೊಡೆದಿದ್ದರೆ. ಆ ಹಣವನ್ನೆಲ್ಲ ಸರಿಯಾಗಿ ಬಳಸಿಕೊಂಡಿದ್ದರೆ ಇಷ್ಟೊತ್ತಿಗೆ ದಲಿತರು ಬಡವರಾಗಿ ಇರುತ್ತಿರಲಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರಿಯಲು ಅನರ್ಹರು. ಕಾಂಗ್ರೆಸ್ ಯಾವಾಗಲೂ ಬ್ಲಾೃಕ್‌ಮೇಲ್ ರಾಜಕಾರಣ ಮಾಡುತ್ತದೆ ಎಂದು ಗುಡುಗಿದರು.
ಸಂಸದ ಶ್ರೇಯಸ್ ಪಟೇಲ್ ಅವರು ಫಲಿತಾಂಶದ ಬಳಿಕ ತಾವು ಬಿಎಸ್‌ಪಿ ನೆರವಿನಿಂದ ಗೆದ್ದಿದ್ದೇನೆ ಎಂದು ಹೇಳಿಕೆ ನೀಡಿದ್ದರು. ಬಿಎಸ್‌ಪಿ ಯಾವ ರೀತಿ ಸಹಾಯ ಮಾಡಿತು ಎಂಬುದನ್ನು ಬಹಿರಂಗಪಡಿಸಬೇಕು. ಬಿಎಸ್‌ಪಿ ನ್ಯಾಯದ ಮಾರ್ಗದಲ್ಲಿ ಸಾಗುತ್ತಿದ್ದು ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. ಅವರಿಗೆ ಸಪೋರ್ಟ್ ಮಾಡಿದ್ದು ಯಾರು ಎಂಬುದನ್ನು ಹೇಳಬೇಕು. ಬಜೆಟ್ ಅಧಿವೇಶನದ ಬಳಿಕ ಅವರನ್ನು ಭೇಟಿಯಾಗಿ ಸ್ಪಷ್ಟನೆ ಕೇಳಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಎಸ್‌ಪಿ ಜಿಲ್ಲಾಧ್ಯಕ್ಷ ಹರೀಶ್ ಅತ್ನಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಮ್ಮ, ಲಕ್ಷ್ಮಣ್ ಕೀರ್ತಿ, ಮಲ್ಲೇಶ್, ಕಿರಣಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net