

ಮಳವಳ್ಳಿ: ಪಟ್ಟಣದ ತಾಲೂಕು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಗುತ್ತಿಗೆದಾರರ ಸಂಘದ ವತಿಯಿಂದ ಅಂಬೇಡ್ಕರ್ ಜಯಂತಿ ಆಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮೊದಲಿಗೆ ಕೊಳ್ಳೇಗಾಲ ಮುಖ್ಯರಸ್ತೆ ಬದಿಯಲ್ಲಿರುವ ಸಂಘದ ಕಚೇರಿಯಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪದಾಧಿಕಾರಿಗಳು ಕೇಕ್ ಕತ್ತರಿಸಿ ವಿತರಣೆ ಮಾಡಿದರು. ಗುತ್ತಿಗೆದಾರರ ಸಂಘದ ಅಧ್ಯಕ್ಷ ಹಳದಾಸಹಳ್ಳಿ ಮಹೇಶ್ ಮಾತನಾಡಿ, ಅಂಬೇಡ್ಕರ್ ಅವರು ನೀಡಿದ ವಿಶ್ವ ಶ್ರೇಷ್ಠ ಸಂವಿಧಾನದಿಂದ ಸಮಾಜದಲ್ಲಿ ಹಿಂದುಳಿದ ಸಮುದಾಯದ ವರ್ಗ ಸಮಾನತೆಯ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ ಎಂದರು.
ನಂತರ ಪ್ರವಾಸಿ ಮಂದಿರದ ಬಳಿ ತೆರಳಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ತಾಲೂಕು ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು, ಹಾಲು ವಿತರಣೆ ಮಾಡಲಾಯಿತು. ಸಂಘದ ಉಪಾಧ್ಯಕ್ಷ ಎಂ.ಡಿ.ಸಂತೋಷ್, ಕಾರ್ಯದರ್ಶಿ ಶಂಕರ್, ಸಹ ಕಾರ್ಯದರ್ಶಿ ಮಂಜುನಾಥ, ಖಜಾಂಚಿ ಡಿ.ನವೀನ್ ಪ್ರಕಾಶ್ ಸೇರಿದಂತೆ ಇತರ ನಿರ್ದೇಶಕರು ಹಾಗೂ ಸದಸ್ಯರಿದ್ದರು.