ಎಸ್ಸಿ, ಎಸ್ಟಿ ಅನುದಾನ ದುರ್ಬಳಕೆ ಸಲ್ಲದು

28rajesh1
Published on

ಚಾಮರಾಜನಗರ: ಈ ಸಾಲಿನ ರಾಜ್ಯ ಬಜೆಟ್‌ನಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ಮೀಸಲಾದ ಅನುದಾನವನ್ನು ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಬಾರದು ಎಂದು ಮಾಜಿ ಸಚಿವ ಶ್ರೀರಾಮುಲು ಆಗ್ರಹಿಸಿದರು.

ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಎಸ್ಸಿ, ಎಸ್ಟಿ ವರ್ಗಕ್ಕೆ ಮೀಸಲಾಗಿರುವ ಅನುದಾನವನ್ನು ಕಳೆದ 2 ವಷಗಳಿಂದಲೂ ದುರ್ಬಳಕೆ ಮಾಡಿಕೊಂಡು ಬಂದಿದೆ. 2022-23 ನೇ ಸಾಲಿನಲ್ಲಿ ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಯಿಂದ 11,144 ಕೋಟಿ ರೂ, ಗಳನ್ನು ಗ್ಯಾರಂಟಿ ಯೋಜನೆಗೆ ದುರ್ಬಳಕೆ ಮಾಡಿಕೊಂಡಿದೆ. 2023-24 ನೇ ಸಾಲಿನಲ್ಲಿ 14,282 ಕೋಟಿ ರೂ, ಹಣವನ್ನು ಹಾಗೂ ಈ ಸಾಲಿನಲ್ಲಿ ಬಜೆಟ್‌ನಲ್ಲಿ 14,488 ಕೋಟಿ ರೂ, ಹಣವನ್ನು ದುರ್ಬಳಕೆ ಮಾಡಿಕೊಳ್ಳಲು ಮುಂದಾಗಿದೆ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಜನಾಂದೋಲನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಈ ಹಿಂದೆ ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿ ಮತ್ತು ವರ್ಗದವರ ಶ್ರೇಯೋಭಿವೃದ್ಧಿಗಾಗಿ ಶೇ.24.10 ರಷ್ಟು ಹಣವನ್ನು ಮೀಸಲಿಟ್ಟಿತ್ತು.ಆದರೆ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಾಗಿ ದಲಿತರ ಹಣವನ್ನು ದುರ್ಬಳಕೆ ಮಾಡಿಕೊಂಡಿದೆ. ನಾವು ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಯನ್ನು ವಿರೋಧ ಮಾಡುತ್ತಿಲ್ಲ. ಆದರೆ ಗ್ಯಾರಂಟಿ ಯೋಜನೆಗಾಗಿ ಪರಿಶಿಷ್ಟ ಜಾತಿ ಮತ್ತು ವರ್ಗದ ಕಲ್ಯಾಣಕ್ಕೆ ಮೀಸಲಿಟ್ಟ ಹಣ ದುರ್ಬಳಕೆ ಮಾಡಿಕೊಳ್ಳುತ್ತಿರುವುದಕ್ಕೆ ನಮ್ಮ ವಿರೋಧವಿದೆ ಎಂದರು.

ಎಸ್ಸಿ, ಎಸ್ಟಿಗಳಿಗೆ ಮೀಸಲಿಟ್ಟ ಅನುದಾನವನ್ನು ಅನ್ಯ ಉದ್ದೇಶಗಳಿಗೆ ಬಳಕೆ ಮಾಡಬಾರದು ಎಂದು ಕಾಯ್ದೆಯಲ್ಲಿ ಹೇಳಲಾಗಿದೆ. ಆದರೂ ರಾಜ್ಯ ಸರ್ಕಾರ ಕಾಯ್ದೆ-ಕಾನೂನನ್ನು ಗಾಳಿಗೆ ತೂರಿ, ಅನುದಾನವನ್ನು ದುರ್ಬಳಕೆ ಮಾಡಿಕೊಂಡು ಬರುತ್ತಿದೆ. ಈ ಕಾರಣದಿಂದ ಎಸ್ಸಿ,ಎಸ್ಸಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಲ್ಯಾಪ್‌ಟಾಪ್, ಸ್ಕಾಲರ್‌ಶಿಪ್, ವಿವಿಧ ಪ್ರೋತ್ಸಾಹ ಧನ, ಗೌರವ ಧನ, ಗಂಗಾ ಕಲ್ಯಾಣ ಯೋಜನೆ ಹಾಗೂ ಇನ್ನಿತರೆ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಣ ನೀಡಲು ಸಾಧ್ಯವಾಗುತ್ತಿಲ್ಲ. ಆಗಾಗಿ ಮುಂಬರುವ ಬಜೆಟ್‌ನಲ್ಲಿ ಎಸ್ಸಿಎಸ್ಪಿ, ಟಿಎಸ್ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಬಾರದು. ರಾಜ್ಯ ಸರ್ಕಾರ ಒಂದು ವೇಳೆ ಅದನ್ನು ಮುಂದುವರಿಸಿದ್ದೆ ಆದರೇ, ಸದನದ ಒಳಗೆ ಮತ್ತು ಹೊರಗೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನ್ ಕುಮಾರ್, ಶಾಸಕ ಡಾ.ಚಂದ್ರು ಲಮಾಣಿ, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಡಾ.ರೇವಣ್ಣ, ಮಾಜಿ ಶಾಸಕ ಎಸ್.ಬಾಲರಾಜು, ಸಿ.ಮುನಿಕೃಷ್ಣ, ಚಿದಾನಂದ ಛಲವಾದಿ, ಶ್ರೀನಿವಾಸ, ಡಾ.ನರೇಂದ್ರ, ಶ್ರೀನಿವಾಸ ದಾಸಕರಿಯಪ್ಪ ಹಾಜರಿದ್ದರು.

ರಾಜ್ಯದ ಖಜಾನೆ ಖಾಲಿ:

ಕಾಂಗ್ರೆಸ್ ಅಧಿಕಾರಕ್ಕೆ ಬರುವ ಉದ್ದೇಶದಿಂದ ಗ್ಯಾರಂಟಿ ಯೋಜನೆಯ ಭರವಸೆಯನ್ನು ನೀಡಿದ್ದರು. ಆದರೇ ಈಗ ಕೊಟ್ಟ ಮಾತು ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಗ್ಯಾರಂಟಿ ಯೋಜನೆಗಾಗಿ ರಾಜ್ಯದ ಖಜಾನೆ ಖಾಲಿ ಮಾಡಿ, ಜನರನ್ನು ಭಿಕ್ಷುಕರನ್ನಾಗಿ ಮಾಡಿದ್ದಾರೆ. ಆರ್ಥಿಕ ಸ್ಥಿತಿ ಸರಿ ದೂಗಿಸಲು ಪರದಾಡುತ್ತಿರುವ ಕಾಂಗ್ರೆಸ್ ಸರ್ಕಾರ ಈಗ ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಮಾಡುತ್ತಿದೆ. ಇವರ ದ್ವಂದ್ವ ನೀತಿ ಜನರಿಗೆ ಈಗ ಅರ್ಥವಾಗುತ್ತಿದ್ದು, ಇವರ ನಾಟಕ ಮುಂದೆ ನಡೆಯುವುದಿಲ್ಲ. ತಮ್ಮಉದ್ದೇಶ ಸಾಕಾರಗೊಳಿಸಲು ಗ್ಯಾರಂಟಿ ಯೋಜನೆಗಾಗಿ ಪ್ರತ್ಯೇಕ ಹಣ ಮೀಸಲಿಡಲಿ. ಅದು ಬಿಟ್ಟು ಬೇರೆ ಅನುದಾನವನ್ನೇಕೆ ಬಳಕೆ ಮಾಡಿಕೊಳ್ಳಬೇಕು. ಸಂವಿಧಾನ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಕಾಂಗ್ರೆಸ್‌ನವರಿಗೆ ಗೌರವವಿದ್ದರೇ ಎಸ್ಸಿ, ಎಸ್ಟಿಗಳಿಗೆ ಮೀಸಲಿಟ್ಟ ಅನುದಾಯವನ್ನು ಯಾವುದೇ ಕಾರಣಕ್ಕೂ ದುರ್ಬಳಕೆ ಮಾಡಬಾರದು ಎಂದು ಒತ್ತಾಯಿಸಿದರು.

ಸದನದಲ್ಲೂ ಹೋರಾಟ:

ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಅನುದಾನವನ್ನು ಅನ್ಯಯೋಜನೆಗಳಿಗೆ ಬಳಕೆ ಮಾಡಬಾರದು ಎಂದು ಸದನದಲ್ಲೂ ಹೋರಾಟ ಮಾಡಲಾಗುವುದು ಎಂದು ಶಾಸಕ ಡಾ.ಚಂದ್ರು ಲಮಾಣಿ ಹೇಳಿದರು. ಈಗಾಗಲೇ ಕಳೆದ ಎರಡು ವರ್ಷಗಳಿಂದಲೂ ಇದರ ವಿರುದ್ಧ ಹೋರಾಟ ಮಾಡಿಕೊಂಡು ಬರಲಾಗುತ್ತಿದೆ. ಈ ನಿಟ್ಟಿನಲ್ಲಿ ಜನಾಂದೋಲನ ಜತೆಗೆ ಸದನದಲ್ಲೂ ಹೋರಾಟ ರೂಪಿಸಲಾಗುವುದು. ಕಾಂಗ್ರೆಸ್‌ನಲ್ಲಿರುವ ದಲಿತ ರಾಜಕಾರಣಿಗಳು ಮ್ಯಾಚ್‌ಫಿಕ್ಸಿಂಗ್ ಮಾಡಿಕೊಂಡಿದ್ದಾರೆ. ದಲಿತರನ್ನು ವೋಟ್ ಬ್ಯಾಂಕ್ ಮಾಡಿಕೊಂಡಿದ್ದಾರೆ ಹೊರತು ಅವರ ಅಭಿವೃದ್ಧಿಗೆ ಮುಂದಾಗಿಲ್ಲ ಎಂದು ಕಿಡಿಕಾರಿದರು.

ಹೆಗ್ಗೋಠಾರ ಗ್ರಾಮಕ್ಕೆ ಭೇಟಿ:

ತಾಲೂಕಿನ ಹೆಗ್ಗೋಠಾರ ಗ್ರಾಮಕ್ಕೆ ಮಾಜಿ ಸಚಿವ ಶ್ರೀರಾಮುಲು ಅವರು ಶುಕ್ರವಾರ ಭೇಟಿ ನೀಡಿದ್ದರು. ಈ ವೇಳೆ ಗ್ರಾಮಸ್ಥರು ಶ್ರೀರಾಮುಲು ಅವರನ್ನು ಭವ್ಯವಾಗಿ ಸ್ವಾಗತಿಸಿದರು. ಮೊದಲಿಗೆ ಗ್ರಾಮದ ಶ್ರೀಸಿದ್ದರಾಮೇಶ್ವರ ದೇವಾಲಯಕ್ಕೆ ಪೂಜೆ ಸಲ್ಲಿಸಿದರು. ಬಳಿಕ ಶ್ರೀವಾಲ್ಮೀಕಿ ಭವನ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು. ನಮ್ಮ ಸರ್ಕಾರ ಅಧಿಕಾರದಲ್ಲಿ ಇದ್ದರೇ ಭವನ ಪೂರ್ಣಗೊಳಿಸಲು ಹೆಚ್ಚಿನ ಅನುದಾನ ನೀಡಿರುತ್ತಿದ್ದೇವು. ಆದರೆ ಎಸ್ಸಿ, ಎಸ್ಟಿಗಳ ಅನುದಾನವನ್ನು ಅನ್ಯ ಉದ್ದೇಶಗಳಿಗೆ ಬಳಕೆ ಮಾಡುವ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ ಎಂದು ಟೀಕಿಸಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಾರಂಭ ಮಾಡಿದ್ದ ವಿಶ್ವವಿದ್ಯಾಲಯಗಳನ್ನು ವಿಲೀನಗೊಳಿಸಲು ನಾವು ಬಿಡುವುದಿಲ್ಲ. ರಾಜ್ಯಸರ್ಕಾರ ಇದಕ್ಕೆ ಮುಂದಾರೇ ನಮ್ಮ ಪಕ್ಷದ ವತಿಯಿಂದ ಹೋರಾಟ ನಡೆಸಲಾಗುವುದು.

-ಸಿ.ಎಸ್.ನಿರಂಜನ್‌ಕುಮಾರ್, ಜಿಲ್ಲಾಧ್ಯಕ್ಷ, ಬಿಜೆಪಿ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net