

ಗೋಣಿಕೊಪ್ಪ: ರೈತರು ಹಾಗು ಸ್ವ ಸಹಾಯ ಗುಂಪಿನ ಸದಸ್ಯರು ಪಡೆದ ಸಾಲವನ್ನು ಸದ್ಬಳಕೆ ಮಾಡಿಕೊಂಡು ಪ್ರಗತಿ ಸಾಧಿಸಬೇಕು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪ್ರಾದೇಶಿಕ ಪ್ರಧಾನ ವ್ಯವಸ್ಥಾಪಕ ವಿ.ಕೆ. ಶ್ರೀಜಿತ್ ಹೇಳಿದರು.
ಪೊನ್ನಂಪೇಟೆ ಇಗ್ಗುತಪ್ಪ ಸಭಾಂಗಣದಲ್ಲಿ ಶುಕ್ರವಾರ ಎಸ್‌ಬಿಐ ಆಯೋಜಿಸಿದ್ದ ಗ್ರಾಹಕ ಸಂಪರ್ಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿಗಾಗಿ ಪಡೆದ ಸಾಲವನ್ನು ಚಿನ್ನಾಭರಣ ಖರೀದಿ, ಆಡಂಬರದ ಜೀವನಕ್ಕಾಗಿ ಬಳಸಿದರೆ ಅದು ಶೂಲವಾಗಿ ಗ್ರಾಹಕರನ್ನೇ ಚುಚ್ಚುತ್ತದೆ. ಹಾಗಾಗಿ ಸಾಲವನ್ನು ಪಡೆದು, ರೈತಪರ ಯೋಜನೆಗಳನ್ನು ಸದುಪಯೋಗ ಮಾಡಿಕೊಂಡು ಉನ್ನತಿ ಸಾಧಿಸಬೇಕು ಎಂದರು.
ಬ್ಯಾಂಕ್ ಅಧಿಕಾರಿಗಳು ಗ್ರಾಮೀಣ ಜನರ ಕ್ರಿಯಾಶೀಲ ಚಟುವಟಿಕೆಗಳಿಗೆ ಸ್ಪಂದಿಸುತ್ತಾರೆ. ಸಕಾಲದಲ್ಲಿ ಸಾಲ ತೀರಿಸಿದರೆ ಎಲ್ಲರಿಗೂ ಕ್ಷೇಮ ಎಂದರು. ಪ್ರಗತಿಪರ ಕೃಷಿಕ ಪಿ. ಸಿ. ಗಣೇಶ ತಿಮ್ಮಯ್ಯ ಮಾತನಾಡಿ, ರೈತರು ವೈಜ್ಞಾನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಅಭಿವೃದ್ಧಿ ಹೊಂದಬೇಕು ಎಂದರು.ಪೊನ್ನಂಪೇಟೆ ಶಾಖೆ ವ್ಯವಸ್ಥಾಪಕ ಎಚ್.ಕೆ. ಲೋಹಿತ್, ಮಡಿಕೇರಿ ಶಾಖೆ ಪ್ರಧಾನ ವ್ಯವಸ್ಥಾಪಕ ಅಮಿತ್ ಕುಮಾರ್ ಸಿಂಗ್, ವಿಕಾಸ ಸಂಸ್ಥೆಯ ಜಿಲ್ಲಾ ಸಂಪರ್ಕ ಅಧಿಕಾರಿ ಲೋಕೇಶ ಹಾಜರಿದ್ದರು.
ಇದೇ ಸಂದರ್ಭ ಪ್ರಗತಿಪರ ಕೃಷಿಕ ಮತ್ತು ಬ್ಯಾಂಕಿನ ಗ್ರಾಹಕ ಪಿ. ಸಿ.ಗಣೇಶ ತಿಮ್ಮಯ್ಯ, ಬ್ಯಾಂಕಿನ ಪ್ರಾದೇಶಿಕ ಪ್ರಧಾನ ವ್ಯವಸ್ಥಾಪಕ ಶ್ರೀಜಿತ್ ಅವರನ್ನು ಸನ್ಮಾನಿಸಲಾಯಿತು. ವಿವಿಧ ಸಂಘ ಸಂಸ್ಥೆ ಪ್ರತಿನಿಧಿಗಳು ಹಾಜರಿದ್ದರು.