ಎಸ್‌ಪಿಎಂಗೆ ಎಂಪಿ ಟಿಕೆಟ್ ಭರವಸೆ?

sogadu
Published on

ವಿಜಯವಾಣಿ ಸುದ್ದಿಜಾಲ ತುಮಕೂರು
ಬಿಜೆಪಿ ಟಿಕೆಟ್ ಹಂಚಿಕೆ ಬಳಿಕ ಕುಣಿಗಲ್ ಕ್ಷೇತ್ರದಲ್ಲಿ ಅಸಮಾಧಾನಗೊಂಡಿದ್ದ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಅವರನ್ನು ಮನವೊಲಿಸುವಲ್ಲಿ ಬಿಜೆಪಿ ಹೈಕಮಾಂಡ್ ಯಶಸ್ವಿಯಾಗಿದೆ.
ಪಕ್ಷ ಸೇರ್ಪಡೆ ಸಂದರ್ಭದಲ್ಲಿ ಭರವಸೆ ನೀಡಿದ್ದರೂ ಕುಣಿಗಲ್ ಕ್ಷೇತ್ರದ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದ ಎಸ್‌ಪಿಎಂ, ಕ್ಷೇತ್ರದಲ್ಲಿ ಬೆಂಬಲಿಗರ ಒತ್ತಾಯಕ್ಕೆ ಮಣಿದು ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದರು. ಆದರೆ, ಪ್ರಭಾವಿ ಎನಿಸಿರುವ ಅವರ ಬಂಡಾಯದ ತೀವ್ರತೆ ತಿಳಿದ ದೆಹಲಿ ಮಟ್ಟದ ವರಿಷ್ಠರೇ ಸಂಧಾನಕ್ಕಿಳಿದು ಮಾತನಾಡಿದ್ದಾರೆ ಎನ್ನಲಾಗಿದ್ದು, ರಾಷ್ಟ್ರ ರಾಜಕಾರಣದಲ್ಲಿ ನಿಮ್ಮ ಅಗತ್ಯವಿದ್ದು ಸೂಕ್ತ ಸಂದರ್ಭದಲ್ಲಿ ಪಕ್ಷ ಬಳಸಿಕೊಳ್ಳಲಿದೆ, ಆತುರದ ನಿರ್ಧಾರ ಮಾಡಬೇಡಿ ಎಂದು ಮಾಡಿಕೊಂಡ ಮನವಿಗೆ ಎಸ್‌ಪಿಎಂ ತಣ್ಣಗಾಗಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್‌ನಲ್ಲಿ ಟಿಕೆಟ್ ತಪ್ಪಿದ್ದರಿಂದ ಬಿಜೆಪಿ ಸೇರ್ಪಡೆಯಾಗಿದ್ದ ಮುದ್ದಹನುಮೇಗೌಡ ಸ್ವತಂತ್ರವಾಗಿ ಸ್ಪರ್ಧಿಸಿದರೆ ಆಗುವ ಪರಿಣಾಮ ಅರಿತ ಹೈಕಮಾಂಡ್ ಕೂಡಲೇ ಕಾರ್ಯಾಚರಣೆಗಿಳಿದು ನಡೆಸಿದ ಸಂಧಾನ ಯಶಸ್ವಿಯಾಗಿದೆ. ಆದರೆ, ಕುಣಿಗಲ್ ಕ್ಷೇತ್ರದಲ್ಲಿ ಅಭಿಮಾನಿಗಳನ್ನು ಸುಮ್ಮನಾಗಿಸುವುದು ಎಸ್‌ಪಿಎಂಗೆ ಸವಾಲಾಗಿದೆ. ಕುಣಿಗಲ್ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಎಚ್.ಡಿ.ರಾಜೇಶ್‌ಗೌಡ ವರಿಷ್ಠರ ಸೂಚನೆಗೆ ಸೊಪ್ಪು ಹಾಕದೆ ಸ್ಪರ್ಧೆ ಖಚಿತಪಡಿಸಿದ್ದು, ಶೀಘ್ರದಲ್ಲಿಯೇ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತೇನೆ ಎಂದು ಘೋಷಿಸಿದ್ದಾರೆ.
ಬಿಜೆಪಿ ಟಿಕೆಟ್ ವಂಚಿತರಾಗಿರುವ ಎಸ್.ಪಿ.ಮುದ್ದಹನುಮೇಗೌಡ, ಎಚ್.ಡಿ.ರಾಜೇಶ್‌ಗೌಡ ಜತೆ ಕಾಂಗ್ರೆಸ್‌ನಲ್ಲಿ ಟಿಕೆಟ್ ವಂಚಿತರಾಗಿರುವ ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿಗೌಡ ಮೂವರೂ ಒಂದಾಗಿ ಕ್ಷೇತ್ರದಲ್ಲಿ ಒಬ್ಬರನ್ನು ಕಣಕ್ಕಿಳಿಸಿ ಉಳಿದಿಬ್ಬರೂ ಬೆಂಬಲಿಸಲಿದ್ದಾರೆ ಎನ್ನಲಾದ ವದಂತಿ ಠುಸ್ ಆಗಿದೆ. ಮೂವರು ಸೇರಿ ನಡೆಸಲಿದ್ದಾರೆ ಎನ್ನಲಾಗಿದ್ದ ಶುಕ್ರವಾರದ ಮಹತ್ವದ ಸಭೆಗೆ ವೇದಿಕೆ ಸೃಷ್ಟಿಯಾಗದೆ ಮೂವರೂ ಪ್ರತ್ಯೇಕವಾಗಿಯೇ ರಾಜಕೀಯ ನಿರ್ಧಾರ ತೆಗೆದುಕೊಳ್ಳುವುದು ಖಚಿತವಾದಂತಾಗಿದೆ.
ಬಿಎಸ್‌ವೈ, ಸಂತೋಷ್ ಸಂಧಾನಕ್ಕೂ ಬಗ್ಗದ ಶಿವಣ್ಣ?: ತುಮಕೂರು ನಗರ ಕ್ಷೇತ್ರದಿಂದ ಪಕ್ಷೇತರನಾಗಿ ಸ್ಪರ್ಧಿಸುವ ನಿರ್ಧಾರ ಪ್ರಕಟಿಸಿರುವ ಬಿಜೆಪಿ ಹಿರಿಯ ಮುಖಂಡ ಸೊಗಡು ಶಿವಣ್ಣ ಮನವೊಲಿಕೆಗೆ ಮುಖಂಡರು ಮುಂದಾಗಿದ್ದಾರೆ ಎನ್ನಲಾಗಿದೆ. ಬಿ.ಎಸ್.ಯಡಿಯೂರಪ್ಪ ಹಾಗೂ ಬಿ.ಎಲ್.ಸಂತೋಷ್ ಖುದ್ದು ಕರೆ ಮಾಡಿ ರಾಜೀನಾಮೆ ವಾಪಸ್ ಪಡೆಯಲು ಮನವಿ ಮಾಡಿಕೊಂಡಿದ್ದಾರೆ. ಆದರೆ, ವರಿಷ್ಠರ ಸಂಧಾನಕ್ಕೆ ಸೆಡ್ಡು ಹೊಡೆದಿರುವ ಸೊಗಡು ಖಾರವಾಗಿಯೇ ಪ್ರತಿಕ್ರಿಯಿಸಿ ಸ್ಪರ್ಧೆ ಖಚಿತ ಎಂಬ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ. ಶಿವಣ್ಣ ಪ್ರತಿಕ್ರಿಯೆಯಿಂದ ವಿಚಲಿತರಾಗಿರುವ ವರಿಷ್ಠರು ಮನವೊಲಿಸುವ ಟಾಸ್ಕ್ ಅನ್ನು ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ವರ್ಗಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net