

ವಿಜಯವಾಣಿ ಸುದ್ದಿಜಾಲ ಧಾರವಾಡ
ಪ್ರತಿಯೊಬ್ಬ ವ್ಯಕ್ತಿ ಜೀವನದಲ್ಲಿ ಯಶಸ್ಸು ಗಳಿಸಲು ಬಯಸುತ್ತಾನೆ. ಆದರೆ, ಗುರಿ ತಲುಪಲು ಯೋಜನೆ ಸಿದ್ಧಪಡಿಸಿ ಕಾರ್ಯೋನ್ಮುಖವಾಗುವುದು ಅಗತ್ಯ. ಜಾಗತಿಕ ಮಟ್ಟದಲ್ಲಿ ಅಗುತ್ತಿರುವ ಬದಲಾವಣೆಗಳಿಗೆ ಹೊಂದಿಕೊಂಡು ಹೊಸತನ್ನು ಕಲಿಯುವುದು ಸೂಕ್ತ ಎಂದು ಮಂಗಳೂರಿನ ಎನಪೋಯಾ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ. ವಿಜಯಕುಮಾರ್ ಹೇಳಿದರು.
ನಗರದ ಡಾ. ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಗುರುವಾರ ಆಯೋಜಿಸಿದ್ದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯದ ಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಪದವಿಯಿಂದ ಬದುಕಿನಲ್ಲಿ ಯಶಸ್ಸು ಗಳಿಸಲು ಸಾಧ್ಯವಿಲ್ಲ. ಪದವಿಯಾಚೆಗಿನ ವೃತ್ತಿ ಬದುಕಿನಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸುವ ಕಲೆ ಕರಗತವಾಗಬೇಕು. ವಿದ್ಯಾರ್ಥಿಗಳು ಯಾರೋ ಮಾಡಿದ್ದನ್ನು ಅನುಕರಣೆ ಮಾಡಲು ಬಯಸುತ್ತಾರೆ. ಪಾಲಕರೂ ಅದನ್ನು ಉತ್ತೇಜಿಸುವುದು ಸರಿಯಲ್ಲ. ದೇಶದಲ್ಲಿ ಪ್ರತಿವರ್ಷ ಲಕ್ಷಾಂತರ ವೈದ್ಯಕೀಯ ಪದವೀಧರು ಹೊರಬರುತ್ತಾರೆ. ಸ್ಪರ್ಧಾತ್ಮಕ ಯುಗದಲ್ಲಿ ವೈದ್ಯಕೀಯ ಪದವಿಗೂ ಕೆಲಸದ ಖಾತ್ರಿ ಇಲ್ಲ. ಸ್ಪರ್ಧೆಯ ವಿವಿಧ ಮಜಲುಗಳಿಗೆ ತಮ್ಮನ್ನು ಸಜ್ಜುಗೊಳಿಸಿಕೊಳ್ಳಬೇಕು ಎಂದರು.
ಎಸ್‌ಡಿಎಂ ವಿಶ್ವವಿದ್ಯಾಲಯದ ಕುಲಾಧಿಪತಿ, ರಾಜ್ಯಸಭಾ ಸದಸ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಸಮಾಜದಲ್ಲಿ ಗೌರವಯುತ ಸ್ಥಾನ ಹೊಂದಿರುವ ವೈದ್ಯಕೀಯ ವೃತ್ತಿಯನ್ನು ಲಕ್ಷಾಂತರ ವಿದ್ಯಾರ್ಥಿಗಳು ಬಯಸುತ್ತಾರೆ. ವೈದ್ಯರಾಗುವವರು ಹಣ ಗಳಿಸುವ ಗುರಿಯೊಂದಿಗೆ ವೃತ್ತಿಗೆ ಸೇರದೆ ರೋಗಿಗಳನ್ನು ಆರೋಗ್ಯವಂತರನ್ನಾಗಿಸುವ ಗುರಿ ಹೊಂದಬೇಕು ಎಂದು ಕಿವಿಮಾತು ಹೇಳಿದರು.
ಉಪ ಕುಲಪತಿ ಡಾ. ನಿರಂಜನ ಕುಮಾರ್, ಕುಲಸಚಿವ ಡಾ. ಚಿದೇಂದ್ರ ಎಂ. ಶೆಟ್ಟರ್, ಡಾ. ಎಸ್.ಕೆ. ಜೋಶಿ, ಇತರರಿದ್ದರು.
411 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ: ಟಿಕೋತ್ಸವದಲ್ಲಿ ಎಸ್‌ಡಿಎಂ ಮೆಡಿಕಲ್ ಕಾಲೇಜಿನ 160 ಪದವಿ ಹಾಗೂ ಸ್ನಾತಕೋತ್ತರ, 109 ದಂತ ಪದವಿ, ಪಿಸಿಯೋಥೆರೆಪಿ ವಿಭಾಗದ 47 ಹಾಗೂ ನರ್ಸಿಂಗ್ ವಿಭಾಗದ 95 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು