ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿ

Gond Samaj
Published on

ಬೀದರ್: ಪರಿಶಿಷ್ಟ ಪಂಗಡಕ್ಕೆ (ಎಸ್ಟಿ) ಉದ್ಯೋಗ ಹಾಗೂ ಶಿಕ್ಷಣದಲ್ಲಿ ಶೇ. 3ರಷ್ಟು ಇರುವ ಮೀಸಲಾತಿ ಸೌಲಭ್ಯವನ್ನು ಶೇ.7.5ಕ್ಕೆ ಹೆಚ್ಚಿಸಬೇಕು ಎಂದು ಜಿಲ್ಲಾ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಗೊಂಡ ಸಂಘ ಆಗ್ರಹಿಸಿದೆ.

ಈ ಕುರಿತು ಮಂಗಳವಾರ ಸಮಾಜದ ಹಿರಿಯ ಮುಖಂಡರೂ ಆದ ಬೀದರ್ ದಕ್ಷಿಣ ಕ್ಷೇತ್ರ ಶಾಸಕ ಬಂಡೆಪ್ಪ ಖಾಶೆಂಪುರ ನೇತೃತ್ವದ ನಿಯೋಗ ಜಿಲ್ಲಾಧಿಕಾರಿ ರಾಮಚಂದ್ರನ್ ಅವರಿಗೆ ಭೇಟಿ ಮಾಡಿ ಮುಖ್ಯಮಂತ್ರಿ ಅವರಿಗೆ ಬರೆದ ಮನವಿ ಪತ್ರ ಸಲ್ಲಿಸಿತು. ಮೀಸಲಾತಿ ಹೆಚ್ಚಿಸುವ ಸಂಬಂಧ ಸಮಗ್ರ ಚರ್ಚಿಸಿ ನ್ಯಾಯಮೂರ್ತಿ ನಾಗಮೋಹನದಾಸ ಸಮಿತಿ ವರದಿ ಸಿದ್ಧ್ದಪಡಿಸಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಈ ವರದಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ನಾಗಮೋಹನದಾಸ ಸಮಿತಿಯ ವರದಿ ಯಥಾವತ್ ಜಾರಿ ಮಾಡಿದರೆ ಪರಿಶಿಷ್ಟ ಪಂಗಡದಲ್ಲಿ ಬರುವ 50 ಜಾತಿಗಳಿಗೆ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಬಹಳ ಅನುಕೂಲವಾಗಲಿದೆ. ಈ ವರದಿ ಜಾರಿಗೆ ವಿಳಂಬ ಮಾಡಿದ್ದಾದರೆ ಬರುವ ದಿನಗಳಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಸಂಘದ ಅಧ್ಯಕ್ಷ ಬಾಬುರಾವ ಮಲ್ಕಾಪುರೆ, ಪ್ರಮುಖರಾದ ಮಲ್ಲಿಕಾರ್ಜುನ ಬಿರಾದಾರ, ಎಂ.ಎಸ್. ಕಟಗಿ, ಮಾಳಪ್ಪ ಅಡಸಾರೆ, ಪೀರಪ್ಪ ಯರನಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net