ಎಸ್‌ಜೆಸಿಇ ಮಕ್ತ ದಿನಾಚರಣೆ: ಆವಿಷ್ಕಾರಗಳ ಜೀವಕಳೆ

mysore
Published on

ಮೈಸೂರು: ಇಂಜಿನಿಯರಿಂಗ್ ವಿದ್ಯಾರ್ಥಿಗಳ ಆವಿಷ್ಕಾರಗಳು, ಸಂಶೋಧನಾ ಮಾದರಿಗಳು, ಏರ್ ಶೋ, ತಾಂತ್ರಿಕ, ಕ್ರಿಯಾತ್ಮಕ ಕೌಶಲಕ್ಕೆ ‘ಓಪನ್ ಡೇ-2025’ ಸಾಕ್ಷಿಯಾಯಿತು.

ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ಹಾಗೂ ಶ್ರೀಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜು(ಎಸ್‌ಜೆಸಿಇ) ವತಿಯಿಂದ ಶನಿವಾರ ‘ಮುಕ್ತ ದಿನಾಚರಣೆ’ಯನ್ನು ಆಯೋಜಿಸಲಾಗಿತ್ತು. ತಾಂತ್ರಿಕ ವಿದ್ಯಾರ್ಥಿಗಳು ಆವಿಷ್ಕರಿಸಿದ ತಂತ್ರಜ್ಞಾನ ಹಾಗೂ ಯಂತ್ರೋಪಕರಣಗಳನ್ನು ಅಂದಾಜು 8 ಸಾವಿರ ಜನರು ಕಣ್ತುಂಬಿಕೊಂಡರು.

ವಿದ್ಯಾರ್ಥಿಗಳಿಂದ ವಿಶೇಷವಾಗಿ ಅಭಿವೃದ್ಧಿಪಡಿಸಲಾದ ವರ್ಚುಯಲ್ ಟೂರ್ ಮೊಬೈಲ್ ಅಪ್ಲಿಕೇಶನ್ ಉದ್ಘಾಟಿಸಲಾಯಿತು. ಇದು ಓಪನ್ ಡೇ ಕಾರ್ಯಕ್ರಮವನ್ನು ಸಂಚರಿಸಲು ಭಾಗವಹಿಸುವವರಿಗೆ ಸಹಾಯ ಮಾಡಿತು.

ತಾಂತ್ರಿಕತೆ ಮತ್ತು ಕ್ರಿಯಾತ್ಮಕತೆಯಿಂದ ತುಂಬಿದ ವಿದ್ಯಾರ್ಥಿಗಳ ಕೆಲಸಗಳ ಪ್ರದರ್ಶನದಿಂದ ಕ್ಯಾಂಪಸ್‌ಗೆ ಜೀವಕಳೆ ಬಂದಿತ್ತು. ನೈಜ ಜಗತ್ತಿಗೆ ಅನ್ವಯಿಸಬಹುದಾದ ಸಂಶೋಧನೆ, ತಾಂತ್ರಿಕ ಕೌಶಲದ ಪ್ರತಿಬಿಂಬವಾಗಿರುವ ವಿದ್ಯಾರ್ಥಿಗಳ ಜೀವಂತ ಮಾದರಿಗಳ ಪ್ರದರ್ಶನ, ಮಾದರಿ ಪ್ರದರ್ಶನಗಳು, ಪೋಸ್ಟರ್ ಪ್ರಸ್ತುತಿಗಳು ಮತ್ತು ಪ್ರೋಟೋಟೈಪ್ ಪ್ರದರ್ಶನ ಕುತೂಹಲ ಮೂಡಿಸಿತು.

ಮೈಸೂರು, ಬೆಂಗಳೂರು ಮತ್ತು ಸುತ್ತಲಿನ ಪ್ರದೇಶಗಳಿಂದ ಬಂದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಪ್ರಾಜೆಕ್ಟ್ ಪ್ರಸ್ತುತಿಗಳ ಸ್ಪರ್ಧೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ವಿಭಾಗದ ಪ್ರದರ್ಶನಗಳನ್ನು ತಜ್ಞರಿಂದ ಕೂಡಿದ ಸಮಿತಿ ವಿಶ್ಲೇಷಿಸಿತು. ವಿದ್ಯಾರ್ಥಿ ಸಂಘಗಳಿಂದ ಹಮ್ಮಿಕೊಳ್ಳಲಾದ ಸಾಂಸ್ಕೃತಿಕ ಕಾರ್ಯಕ್ರಮ, ಥೀಮ್ ಆಧಾರಿತ ಆಟಗಳೊಂದಿಗೆ ಹಾಸ್ಯಾತ್ಮಕ ಮೇಳ ವಿಶೇಷ ಎನಿಸಿತು.

ಕಾಲೇಜಿನ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ವಿಜ್ಞಾನ, ತಂತ್ರಜ್ಞಾನ ಮತ್ತು ಆಟೋಮೊಬೈಲ್ ಕ್ಷೇತ್ರದಲ್ಲಿ ಆವಿಷ್ಕರಿಸಿರುವ ಯಂತ್ರೋಪಕರಣಗಳ ಮಾದರಿಯನ್ನು ಪ್ರದರ್ಶಿಸಿ ಪ್ರಾತ್ಯಕ್ಷಿಕೆ ಸಹ ನೀಡಿದರು. ಇದರೊಂದಿಗೆ ಮೂಲಕ ತಮ್ಮಲ್ಲಿರುವ ಪ್ರತಿಭೆ ಅನಾವರಣಗೊಳಿಸಿದರು.

ಓಪನ್ ಡೇ ಅಂಗವಾಗಿ ಎಸ್‌ಜೆಸಿಇ ಆವರಣವನ್ನು ಬಣ್ಣ ಬಣ್ಣದ ತಳಿರು, ತೋರಣಗಳಿಂದ ಅಲಂಕರಿಸಲಾಗಿತ್ತು. ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಸಂಭ್ರಮದಿಂದ ತಾವು ಆವಿಷ್ಕರಿಸಿರುವ ತಂತ್ರಜ್ಞಾನ ಪ್ರದರ್ಶಿಸುವ ಮೂಲಕ ಪ್ರಶಂಸೆಗೆ ಪಾತ್ರರಾದರು.

ಕಾಲೇಜಿನ ಮೆಕಾನಿಕಲ್ ಇಂಜಿನಿಯರಿಂಗ್‌ವಿದ್ಯಾರ್ಥಿಗಳಾದ ಪ್ರಜ್ವಲ್, ರಮೇಶ್, ರಶ್ಮಿ, ದರ್ಶನ್ ಅವರು ಸಾಂಬರ್ ತಯಾರಿಸುವ ಯಂತ್ರ ಆವಿಷ್ಕರಿಸಿ ಪ್ರದರ್ಶನ ಇಲ್ಲಿತ್ತು. ಫ್ಯಾಬ್ರಿಕೇಷನ್ ಆ್ಯಂಡ್ ಡೆವಲಪ್ಮೆಂಟ್ ಆಫ್ ಆಟೋಮೇಟಿಕ್ ಕರಿ ಮೇಕಿಂಗ್ ಮೆಷನ್ ಹೆಸರಿನಲ್ಲಿ ತಯಾರಿಸಿರುವ ಈ ಯಂತ್ರ ಸ್ವಯಂ ಚಾಲನೆಯಿಂದ ಸಾಂಬರ್ ತಯಾರಿಸುತ್ತದೆ.

ಪೈಥಾನ್ ಕೋಡಿಂಗ್ ಅಥವಾ ಸಿ ಪ್ರೋಗ್ರಾಂ ಬಳಸಿ ತಯಾರಿಸಿರುವ ಈ ಯಂತ್ರ ತರಕಾರಿ ಕತ್ತರಿಸಿ, ಒಗ್ಗರಣೆ ಮಾಡಿ, ಸಾಂಬರ್ ಪೌಡರ್ ಹಾಗೂ ರುಚಿಗೆ ತಕ್ಕಂತೆ ಉಪ್ಪು ಹಾಕಿ ಸಾಂಬರ್ ತಯಾರಿಸುತ್ತದೆ. ಅದಕ್ಕಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಹೋಟೆಲ್ ಹಾಗೂ ಮಠ ಸೇರಿದಂತೆ ಧಾರ್ಮಿಕ ಸಂಸ್ಥೆಗಳಲ್ಲಿ ಅನ್ನ ದಾಸೋಹ ಮಾಡುವ ವೇಳೆ ಈ ಯಂತ್ರವನ್ನು ಉಪಯೋಗ ಮಾಡಬಹುದಾಗಿದೆ.

ಮೆಕಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ಎಫ್.ಸಲ್ಮಾನ್, ಎನ್.ಕಿರಣ್, ರೋಶನ್ ಸಿಂಗ್, ಜೆ.ಚಂದನ್ ತಂಡ ‘ಡಿಸೈನ್ ಆ್ಯಂಡ್ ಫ್ಯಾಬ್ರಿಕೇಷನ್ ಆಫ್ ಶುಗರ್ ಕೇನ್ ಹಾರ್ವೆಸ್ಟಿಂಗ್ ಮಿಷನ್ ಟೂಲ್’ ಹೆಸರಿನ ಕಬ್ಬು ಕತ್ತರಿಸುವ ಯಂತ್ರ ವಿಶೇಷವಾಗಿತ್ತು. ಈ ಯಂತ್ರದಿಂದ ಕಬ್ಬಿನ ಗದ್ದೆಯಲ್ಲಿ ಬೆಳೆದಿರುವ ಕಬ್ಬನ್ನು ಕತ್ತರಿಸುವಾಗ ಕಬ್ಬಿನ ಮೇಲ್ಭಾಗದಲ್ಲಿ ಬೆಳೆದಿರುವ ಸೋಗು(ಎಲೆ)ಯನ್ನು ಬೇರ್ಪಡಿಸಿ, ಕಬ್ಬನ್ನು ಮಾತ್ರ ಪ್ರತ್ಯೇಕಿಸುವ ಸಾಮರ್ಥ್ಯ ಹೊಂದಿದೆ.

ಹೊಲ-ಗದ್ದೆಯಲ್ಲಿ ಬೆಳೆದ ಬೆಳೆಗಳನ್ನು ತಿನ್ನಲು ಬರುವ ಪಕ್ಷಿ ಹಾಗೂ ಪ್ರಾಣಿಗಳು ಓಡಿಸುವುದಕ್ಕಾಗಿ ಇಂಡಸ್ಟ್ರಿಯಲ್ ಪ್ರೊಡಕ್ಷನ್ ವಿಭಾಗದ ವಿದ್ಯಾರ್ಥಿನಿಯರಾದ ಸಹನಾ, ಆರ್.ಅನನ್ಯಾ, ಎಂ.ಎಸ್.ನಿಶ್ಚಿತಾ, ಡಿ.ವರ್ಷಾ ತಂಡ ಡೆವಲಪ್ಡ್ ಕ್ಯಾಮರಾ ಸ್ಕೇರ್‌ಕ್ರೌ ಯಂತ್ರ ಸಿದ್ಧಪಡಿಸಿತ್ತು.

ಈ ಯಂತ್ರವನ್ನು ಜಮೀನಿನಲ್ಲಿ ಅಳವಡಿಸಿದರೆ, ಕ್ಯಾಮರಾದಲ್ಲಿ ಪಕ್ಷಿ ಅಥವಾ ಪ್ರಾಣಿ ಬಂದಾಗ ಮಾತ್ರ ಶಬ್ದ ಮಾಡಿ, ಓಡಿಸುತ್ತದೆ. ಪ್ರಸ್ತುತ ರೈತರು ಮೈಕ್ ಅಳವಡಿಸಿ ರಾತ್ರಿಯಿಡೀ ಶಬ್ದ ಬರುತ್ತದೆ. ಇದರಿಂದ ಕೆಲವು ಸಂದರ್ಭದಲ್ಲಿ ಬ್ಯಾಟರಿ ಡೌನ್ ಆಗುವ ಸಾಧ್ಯತೆಯೂ ಇರುತ್ತದೆ. ಆದರೆ, ವಿದ್ಯಾರ್ಥಿನಿಯರು ತಯಾರಿಸಿರುವ ಈ ಯಂತ್ರ ಪಕ್ಷಿ-ಪ್ರಾಣಿ ಬಂದಾಗ ಮಾತ್ರ ಶಬ್ದ ಮಾಡುವುದರಿಂದ ಬ್ಯಾಟರಿ ವೀಕ್ ಆಗುವುದನ್ನು ತಪ್ಪಲಿದೆ.

ವಿದ್ಯಾರ್ಥಿಗಳು ಆವಿಷ್ಕರಿಸಿದ ಬ್ಲೂಟೂತ್ ಗ್ರಾಸ್ ಕಟರ್, ರೋಬಾಟ್, ಮಲ್ಟಿಪಲ್ ಅಗ್ರಿಕಲ್ವರಲ್ ಎಕ್ಯೂಪ್‌ಮೆಂಟ್ ಸೇರಿದಂತೆ ಸುಮಾರು 90ಕ್ಕೂ ಹೆಚ್ಚು ವಿವಿಧ ಆವಿಷ್ಕಾರಗಳ ಪ್ರದರ್ಶನ ಏರ್ಪಡಿಸಿ ಗಮನ ಸೆಳೆದರು.

ಕೆಎಸ್‌ಸಿಎ ಮೈದಾನದಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದಿಂದ ಆಯೋಜಿಸಲಾದ ಅದ್ಭುತ ಏರ್ ಶೋ ಆಕರ್ಷಿಸಿತು. ರಿಮೋರ್ಟ್ ಕಂಟ್ರೋಲರ್ ಬಳಸಿ ವಿದ್ಯಾರ್ಥಿಗಳು ಏರ್ ಶೋ ನಡೆಸುವ ಮೂಲಕ ಅಪಾರ ಸಂಖ್ಯೆಯ ವಿದ್ಯಾರ್ಥಿಗಳನ್ನು ರಂಜಿಸಿದರು. ಜತೆಗೆ, ವಿದ್ಯಾರ್ಥಿಗಳೇ ತಯಾರಿಸಿ ಚಿಕ್ಕ ಚಿಕ್ಕ ವಿಮಾನಗಳ ಹಾರಾಟ ಪ್ರದರ್ಶನ ಏರ್ಪಡಿಸಲಾಗಿತ್ತು. ಲೋಹದ ಹಕ್ಕಿಗಳಂತೆ ಆಗಸದಲ್ಲಿ ಪುಟ್ಟ ವಿಮಾನಗಳ ಸಾಹಸ ಪ್ರದರ್ಶಿಸಿದವು.

ಉದ್ಘಾಟನೆ

ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ ಕಾರ್ಯಕ್ರಮ ಉದ್ಘಾಟಿಸಿದರು. ಕುಲಪತಿ ಡಾ.ಎ.ಎನ್.ಸಂತೋಷ್ ಕುಮಾರ್, ಪ್ರಾಂಶುಪಾಲ ಡಾ.ಸಿ. ನಟರಾಜು, ಪರೀಕ್ಷಾ ನಿಯಂತ್ರಕ ಡಾ.ಪಿ. ನಂಜುಂಡಸ್ವಾಮಿ, ಉಪ ಕುಲಸಚಿವ ಡಾ.ಬಿ.ಎಸ್.ಹರೀಶ್, ಕಾರ್ಯಕ್ರಮ ಸಂಯೋಜಕರಾದ ಡಾ.ಕೆ.ಎಂ.ಅನಿಲ್ ಕುಮಾರ್ ಮತ್ತು ಡಾ.ಎಂ.ಎನ್.ನಾಗೇಂದ್ರ ಪ್ರಸಾದ್ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net