ಎಸ್‌ಜೆಎಂ ಪ್ರಾಚಾರ್ಯರಾಗಿ ಮರು ನೇಮಕಕ್ಕೆ ಹೈಕೋರ್ಟ್ ಆದೇಶ

CTD HKS SWAMI..
Published on

ಚಿತ್ರದುರ್ಗ: ನಗರದ ಎಸ್‌ಜೆಎಂ ಫಾರ್ಮಸಿ ಕಾಲೇಜಿಗೆ ಡಾ.ಎಚ್‌ಕೆಎಸ್ ಸ್ವಾಮಿ ಅವರನ್ನು ಮರು ನೇಮಿಸುವಂತೆ ಹೈಕೋರ್ಟ್ ಆದೇಶಿಸಿದೆ.

ಕಾಲೇಜಿನ ಪ್ರಾಧ್ಯಾಪಕರಾಗಿದ್ದ ತಾವು, ಪ್ರಾಚಾರ್ಯರಾಗಿ ಬಡ್ತಿ ಪಡೆದಿದ್ದರೂ ಆ ಹುದ್ದೆಯಲ್ಲಿ ಸೇವೆ ಮುಂದುವರಿಸಲು ಅವಕಾಶ ನೀಡದ ಆಡಳಿತ ಮಂಡಳಿ ಕ್ರಮದ ವಿರುದ್ಧದ ಸುದೀರ್ಘ 15 ವರ್ಷಗಳ ಕಾನೂನು ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ಸ್ವಾಮಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಾಚಾರ್ಯರಾಗಿ ಮರು ನೇಮಕ ಮಾಡಿಕೊಳ್ಳಬೇಕು ಹಾಗೂ ಎಲ್ಲ ಸೇವಾ ಸೌಲಭ್ಯಗಳನ್ನು ನೀಡುವುದರೊಂದಿಗೆ 2007ರಿಂದ ಈವರೆಗೆ ಶೇ. 50 ವೇತನ ನೀಡಬೇಕೆಂದು ಕೋರ್ಟ್ ನಿರ್ದೇಶಿಸಿದೆ. ಪ್ರಾಧ್ಯಾಪಕರಾಗಿದ್ದ ತಮಗೆ 2007ರಲ್ಲಿ ಬಡ್ತಿ ಸಿಕ್ಕಿದ್ದರೂ, ಕರ್ತವ್ಯ ನಿರ್ವಹಣೆಗೆ ಮತ್ತು ವೇತನ ಪಡೆಯಲು ಅವಕಾಶ ಕೊಟ್ಟಿರಲಿಲ್ಲ.

ನನಗಾದ ಅನ್ಯಾಯದ ವಿರುದ್ಧ ಕಾನೂನು ಮೊರೆ ಹೋಗಿದ್ದೆ ಹಾಗೂ ಅರ್ಹತೆ ಇಲ್ಲದಿದ್ದರೂ ಬೇರೆಯವರನ್ನು ಪ್ರಾಚಾರ್ಯರನ್ನಾಗಿ ನೇಮಿಸಲಾಗಿದೆ ಎಂದು, ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಮತ್ತು ಫಾರ್ಮಸಿ ಕೌನ್ಸಿಲ್ ಆಫ್ ಇಂಡಿಯಾಕ್ಕೆ ದೂರು ನೀಡಿದ್ದಾಗಿ ತಿಳಿಸಿದ್ದಾರೆ.

ಇದನ್ನು ಸಹಿಸದ ಆಡಳಿತ ಮಂಡಳಿ, ತಮ್ಮ ವಿರುದ್ಧ ಸಂಸ್ಥೆ ವಿರೋಧಿ ಚಟುವಟಿಕೆಗಳ ಆರೋಪ ಹೊರಿಸಿ ಸೇವೆಯಿಂದ ಅಮಾನತು ಗೊಳಿಸಿತ್ತು. ಸರ್ಕಾರ ಅಮಾನತು ರದ್ದುಗೊಳಿಸಿತ್ತಾದರೂ, ಪ್ರಾಚಾರ್ಯ ಹುದ್ದೆಗೆ ಹೊರತು ಪ್ರಾಧ್ಯಾಪಕರಾಗಿ ಅಲ್ಲವೆಂದು ಹೇಳಿ ಸಂಬಳ ಪಡೆಯದೇ ಈವರೆಗೂ ನ್ಯಾಯಕ್ಕಾಗಿ ಹೋರಾಟ ನಡೆಸಿದ್ದಾಗಿ ಸ್ವಾಮಿ ಹೇಳಿದ್ದಾರೆ.

ಕಳೆದ ಸೆಪ್ಟೆಂಬರ್ 24ರಂದು ಹೈಕೋರ್ಟ್ ಹೊರಡಿಸಿರುವ ಆದೇಶದಿಂದಾಗಿ, 2025 ಜನವರಿ 22ರಂದು ನಿವೃತ್ತಿ ಹೊಂದಬೇಕಿರುವ ತಮಗೆ 3 ತಿಂಗಳ ಕಾಲಾವಧಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಂತಾಗಿದೆ ಎಂದು ಸ್ವಾಮಿ ತಿಳಿಸಿದ್ದಾರೆ.

...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net