

ಬೀದರ್: ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಜಿಲ್ಲೆಯ ಎಲ್ಲ ಬ್ಯಾಂಕ್ ಗಳು ಸ್ಟ್ಯಾಂಡರ್ಡ್ ಆಪರೇಟಿಂಗ್ ವಿಧಾನ (ಎಸ್ಒಪಿ) ನಿಯಮಗಳ ಪ್ರಕಾರ ಹಣ ವರ್ಗಾಯಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಗೋವಿಂದರಡ್ಡಿ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಬ್ಯಾಂಕ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಯಾವುದೇ ಬ್ಯಾಂಕಿನಿಂದ ಹಣವನ್ನು ವರ್ಗಾವಣೆ ಮತ್ತು ವಿತ್ ಡ್ರಾ ಮಾಡುವ ಸಂದರ್ಭದಲ್ಲಿ ಅದಕ್ಕೆ ಸಂಬಂಧಿಸಿದ ಅಧಿಕೃತ ದಾಖಲೆಗಳು ಜತೆಯಲ್ಲಿ ತೆಗೆದುಕೊಂಡು ಹೋಗುವಂತೆ ಸಂಬಂಧಿಸಿದ ಬ್ಯಾಂಕಿನವರಿಗೆ ತಿಳಿಸಬೇಕು. ಹಣವನ್ನು ಹಗಲಿನಲ್ಲಿ ಮಾತ್ರ ವರ್ಗಾಯಿಸಬೇಕು. ರಾತ್ರಿ ಸಮಯದಲ್ಲಿ ಹಣಕಾಸಿನ ವ್ಯವಹಾರ ನಡೆಯದಂತೆ ನೋಡಿಕೊಳ್ಳಬೇಕು ಎಂದರು
ಹತ್ತು ಲಕ್ಷಕ್ಕಿಂತ ಹೆಚ್ಚಿನ ಹಣ ಬ್ಯಾಂಕ್ ನಲ್ಲಿ ಡಿಪಾಜಿಟ್ ಮಾಡುವುದು ಮತ್ತು ವಿತ್ ಡ್ರಾ ಮಾಡಿಕೊಳ್ಳುವ ಗ್ರಾಹಕರ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆ ಗಮನಕ್ಕೆ ತರಬೇಕು. ಇದರ ಹೊರತಾಗಿ ಯಾವುದೇ ಸಂಶಯಾಸ್ಪದ ಹಣ ಕಂಡುಬಂದರೆ ನಮ್ಮ ಗಮನಕ್ಕೆ ತರಬೇಕೆಂದು ಹೇಳಿದರು.
ಹಣ ವರ್ಗಾವಣೆಯು ಎಸ್ಒಪಿ ಪ್ರಕಾರ ಮಾಡಿದರೆ ಯಾರೂ ಹಿಡಿಯುವುದಿಲ್ಲ. ದಾಖಲಾತಿ ಇಲ್ಲದ ಹಣವನ್ನು ಸಂಶಯಾಸ್ಪದ ರೀತಿಯಲ್ಲಿ ಕಂಡುಬರುತ್ತದೆ. ಒಂದು ಬ್ಯಾಂಕ್ ನಿಂದ ಇನ್ನೊಂದು ಬ್ಯಾಂಕ್‌ಗೆ ಮತ್ತು ಎಟಿಎಂಗೆ ಹಣ ವರ್ಗಾವಣೆ ಸಂದರ್ಭದಲ್ಲಿ ನಿಯಮಗಳನ್ನು ಪಾಲಿಸಬೇಕು. ರೂ. 10 ಲಕ್ಷಕ್ಕಿಂತ ಹೆಚ್ಚಿನ ಹಣದ ವರ್ಗಾವಣೆ ಮತ್ತು ವಿತ್ ಡ್ರಾ ಮಾಡದಂತೆ ತಮ್ಮ ಬ್ಯಾಂಕಿನ ಗ್ರಾಹಕರ ಗಮನಕ್ಕೆ ತರಬೇಕು ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ, ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಸಂಜೀವ್, ಡಿಸಿಸಿ ಬ್ಯಾಂಕ್ ಎಂಡಿ ಮಹಾಜನ ಮಲ್ಲಿಕಾರ್ಜುನ, ನಬಾಡ್೯ ಜಿಲ್ಲಾ ವ್ಯವಸ್ಥಾಪಕ ರಾಮರಾವ್, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಬಸವರಾಜ ಕೋಲಿ ಇತರ ಬ್ಯಾಂಕ್‌ಗಳ ಪ್ರತಿನಿಧಿಗಳು ಭಾಗವಹಿಸಿದ್ದರು.