ಎಸ್‌ಐಟಿಯಿಂದ ಜಿಲ್ಲೆಯಲ್ಲಿ 18 ಕಡೆ ಶೋಧ ಕಾರ್ಯ

ಎಸ್‌ಐಟಿಯಿಂದ ಜಿಲ್ಲೆಯಲ್ಲಿ 18 ಕಡೆ ಶೋಧ ಕಾರ್ಯ
Published on

ಹಾಸನ: ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಹಂಚಿಕೆ ಪ್ರಕರಣ ಸಂಬಂಧ ಎಸ್‌ಐಟಿ ಅಧಿಕಾರಿಗಳು ಮಂಗಳವಾರ ಸಂಜೆಯಿಂದ ಬುಧವಾರ ಮುಂಜಾನೆ 3.30ರವರೆಗೂ ಜಿಲ್ಲೆಯ ವಿವಿಧೆಡೆ ಒಟ್ಟು 18 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದರು.
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಅವರ ಮೂವರು ಆಪ್ತರು ಹಾಗೂ ವಕೀಲ ದೇವರಾಜೇಗೌಡ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಆನಂತರ ಬೇಲೂರಿನ ನೆಲ್ಕೆ ಗ್ರಾಮದಲ್ಲಿ ಸಚಿವ ಜಮೀರ್ ಅಹಮದ್ ಅವರ ಆಪ್ತ ನವೀನ್ ಗೌಡ ಅವರ ಮನೆಯಲ್ಲೂ ಅಧಿಕಾರಿಗಳು ತಲಾಶ್ ನಡೆಸಿದರು.
ಶೋಧನಾ ಪಂಚನಾಮೆ:
ಪ್ರತ್ಯೇಕ ತಂಡಗಳಲ್ಲಿ ಮಂಗಳವಾರ ಸಂಜೆ 4 ಗಂಟೆಗೆ ಬೆಂಗಳೂರಿನಿಂದ ಬಂದ ಎಸ್‌ಐಟಿ ಅಧಿಕಾರಿಗಳು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಅವರ ಆಪ್ತರಾದ ಕ್ವಾಲಿಟಿ ಬಾರ್ ಶರತ್, ಪುನೀತ್, ಎಚ್.ಪಿ.ಕಿರಣ್, ಕಾಂಗ್ರೆಸ್ ಕಾರ್ಯಕರ್ತರಾದ ಪುಟ್ಟರಾಜು, ನವೀನ್‌ಗೌಡ, ಪ್ರಜ್ವಲ್ ರೇವಣ್ಣ ಮಾಜಿ ಕಾರು ಚಾಲಕ ಕಾರ್ತಿಕ್, ಶಶಿ, ಚೇತನ್‌ಗೌಡ ನಿವಾಸದ ಮೇಲೂ ಎಸ್‌ಐಟಿ ತಂಡಗಳು ಪ್ರತ್ಯೇಕವಾಗಿ ಪರಿಶೀಲನೆ ನಡೆಸಿದವು.
ಕ್ವಾಲಿಟಿ ಬಾರ್ ಶರತ್ ಅವರ ಬೆಂಗಳೂರಿನ ಗೋಪಾಲನಗರದ ಶೋಭಾ ಅಪಾರ್ಟ್‌ಮೆಂಟ್‌ನಲ್ಲಿರುವ ಫ್ಲಾಟ್ ಮೇಲೂ ದಾಳಿ ಮಾಡಿದ್ದ ಎಸ್‌ಐಟಿ ಟೀಂ ಶರತ್ ಅವರ ಐಫೋನ್ ವಶಕ್ಕೆ ಪಡೆದು ಪರಿಶೀಲಿಸಿದೆ. ಆದರೆ ಅವರ ಮನೆಯಲ್ಲಿ ಪ್ರಕರಣಕ್ಕೆ ಉಪಯುಕ್ತ ದಾಖಲಾತಿ ಅಥವಾ ಎಲೆಕ್ಟ್ರಾನಿಕ್ ವಸ್ತುಗಳು ದೊರಕಿಲ್ಲ ಎಂದು ಎಸ್‌ಐಟಿ ಶೋಧನಾ ಪಂಚನಾಮೆಯಲ್ಲಿ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net