

ಹಾಸನ: ಜಿಲ್ಲೆಯ ಹೆಣ್ಣು ಮಕ್ಕಳ ಮಾನ ಹಾನಿಯಾಗುವ ದೃಶ್ಯಾವಳಿಗಳನ್ನು ಸಾಮಾಜಿಕ ಜಾಲತಾಣ ಹಾಗೂ ಇತರೆಡೆಗಳಲ್ಲಿ ಹರಿ ಬಿಟ್ಟಿರುವುದನ್ನು ಜಿಲ್ಲಾ ಜೆಡಿಎಸ್ ತೀವ್ರವಾಗಿ ಖಂಡಿಸಿದೆ.
ನಗರದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎಸ್.ಲಿಂಗೇಶ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಹಾಲಿ ಹಾಗೂ ಮಾಜಿ ಶಾಸಕರು, ತಾಲೂಕು ಅಧ್ಯಕ್ಷರು ಹಾಗೂ ಹಿರಿಯ ಮುಖಂಡರ ಸಭೆಯಲ್ಲಿ ಹೆಣ್ಣು ಮಕ್ಕಳ ಮಾನಹಾನಿಗೆ ಬೆಲೆ ಕಟ್ಟಲಾಗುವುದಿಲ್ಲ. ಹೀಗಾಗಿ ಇಡೀ ಪ್ರಕರಣವನ್ನು ಆರಂಭದಿಂದ ಈವರೆಗೂ ಸಮಗ್ರ ತನಿಖೆಗೆ ಒಳಪಡಿಸಬೇಕು. ಪೆನ್‌ಡ್ರೈವ್ ಹರಿದಾಡಲು ಮೂಲ ಕಾರಣ ಯಾರು? ಇದರ ಹಿಂದೆ ಯಾರೆಲ್ಲಾ ಇದ್ದಾರೆ? ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸಹಕಾರ ನೀಡಿರುವವರನ್ನು ಪಕ್ಷಾತೀತವಾಗಿ ಪತ್ತೆ ಹಚ್ಚಿ ದಂಡನೆಗೆ ಗುರಿ ಪಡಿಸಬೇಕು. ಹಾಗೂ ಈ ಬಗ್ಗೆ ಎಸ್‌ಐಟಿಯಿಂದ ನ್ಯಾಯಸಮ್ಮತ ತನಿಖೆ ನಡೆದು, ವರದಿ ಹೊರಬರಲು ಸರ್ಕಾರ ಎಲ್ಲಾ ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.
ಇದೇ ವೇಳೆ ಜಿಲ್ಲೆಯ ಅಭಿವೃದ್ಧಿ ಹರಿಕಾರರು, ಸವಾರ್ಂಗೀಣ ಪ್ರಗತಿಗೆ ತಮ್ಮದೇ ಶ್ರಮ ಹಾಕಿ ಶಕ್ತಿ ತುಂಬಿರುವ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರನ್ನು ಯಾರದೋ ಸುಳ್ಳು ಹೇಳಿಕೆ ಆಧರಿಸಿ ಎ1 ಆರೋಪಿ ಮಾಡಿರುವುದನ್ನೂ ಸಭೆಯಲ್ಲಿ ತೀವ್ರವಾಗಿ ಖಂಡಿಸಲಾಯಿತು. ರೇವಣ್ಣ ಅವರನ್ನು ಎ1 ಆರೋಪಿ ಮಾಡಿರುವುದು ರಾಜಕೀಯ ದುರುದ್ದೇಶವೇ ಹೊರತು ಮತ್ತೇನು ಅಲ್ಲ, ಪ್ರಕರಣದಲ್ಲಿ ರೇವಣ್ಣ ಅವರನ್ನು ತಳುಕು ಹಾಕಿರುವುದನ್ನೂ ಖಂಡಿಸಿದರು. ಇದೇ ವೇಳೆ ಮಹಿಳೆಯರ ಕುಟುಂಬದವರೇ ರೇವಣ್ಣ ಅವರ ವಿರುದ್ಧ ಮಾಡಿರುವ ಆರೋಪ ಸುಳ್ಳು ಎಂದು ಬಹಿರಂಗವಾಗಿ ಹೇಳಿದ್ದಾರೆ ಎಂದು ಮುಖಂಡರು ಹೇಳಿದರು.
ಚುನಾವಣೆ ಮುಗಿದ ನಂತರ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಮಹಿಳೆಯೊಬ್ಬರ ಮೇಲೆ ಒತ್ತಡ ಹಾಕಿ, ಅವರನ್ನು ಪ್ರಚೋದಿಸಿದವರು ಯಾರು? ಯಾರೆಲ್ಲಾ ಸಂಪರ್ಕ ಮಾಡಿದ್ದರು? ಪ್ರಕರಣ ದಾಖಲು ಮಾಡುವ ಮುನ್ನ ಯಾರೆಲ್ಲಾ ಚರ್ಚೆ ಮಾಡಿದ್ದಾರೆ ಎಂಬುದರ ಬಗ್ಗೆಯೂ ಸಮಗ್ರ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ವಿಶ್ವ ನಾಯಕ ದೇಶದ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಹೆಸರುಗಳನ್ನು ವಿನಾಃಕಾರಣ ಎಳೆದು ತರುವುದಕ್ಕೆ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದರು. ಅಂತಿಮವಾಗಿ ಸಮಾಜದ ಹಿತದೃಷ್ಟಿಯಿಂದ, ಈ ನೆಲದ ಕಾನೂನಿಗೆ ಗೌರವ ಕೊಟ್ಟು ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಪಕ್ಷದಿಂದ ಅಮಾನತು ಮಾಡಿರುವುದನ್ನು ಪಕ್ಷದ ಹಿತದೃಷ್ಟಿಯಿಂದ ಎಲ್ಲರೂ ಸ್ವಾಗತಿಸಿದರು.
ಸಭೆಯಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ, ತಾಲೂಕು ಅಧ್ಯಕ್ಷರಾದ ಎಸ್.ದ್ಯಾವೇಗೌಡ, ದೇವರಾಜೇಗೌಡ, ಕಣದಹಳ್ಳಿ ಮಂಜೇಗೌಡ, ದೊಡ್ಡದಿಣ್ಣೆ ಸ್ವಾಮಿ, ಹಾಮೂಲ್ ನಿರ್ದೇಶಕ ಬೂವನಹಳ್ಳಿ ಸ್ವಾಮಿಗೌಡ, ಜಿಲ್ಲಾ ಜೆಡಿಎಸ್ ವಕ್ತಾರ ಹೊಂಗೆರೆ ರಘು, ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗರಾಜು ಹಾಗೂ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು, ಮುಖಂಡರು ಇದ್ದರು.