

ಪರೀಕ್ಷೆ ಬರೆದಿದ್ದ 19,294 ವಿದ್ಯಾರ್ಥಿಗಳಲ್ಲಿ 695 ಮಕ್ಕಳು ಮಾತ್ರ ಅನುತ್ತೀರ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿದ್ದು, ಹಾಸನ ಜಿಲ್ಲೆ ಫಲಿತಾಂಶದಲ್ಲಿ ಶೇ.96.68 ಪಡೆಯುವ ಮೂಲಕ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದುಕೊಂಡಿದೆ. ಕಳೆದ ಬಾರಿ ಶೇ.95.60 ಎಸ್‌ಎಸ್‌ಎಲ್‌ಸಿ ಫಲಿತಾಂಶ ಪಡೆಯುವ ಮೂಲಕ ಹಾಸನ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿತ್ತು. ಈ ಬಾರಿ ಶೇ.1.08ರಷ್ಟು ಹೆಚ್ಚಿನ ಫಲಿತಾಂಶ ಪಡೆದಿದೆ.
9409 ಬಾಲಕರು ಹಾಗೂ 9885 ಬಾಲಕಿಯರು ಸೇರಿ ಒಟ್ಟು 19294 ವಿದ್ಯಾರ್ಥಿಗಳು ಕಳೆದ ಮಾರ್ಚ್- ಏಪ್ರಿಲ್ ತಿಂಗಳಿನಲ್ಲಿ ನಡೆದಿದ್ದ ಪರೀಕ್ಷೆ ಬರೆದಿದ್ದರು. ಇವರಲ್ಲಿ 8,997 ಬಾಲಕರು ಹಾಗೂ 9602 ಬಾಲಕಿಯರು ಸೇರಿ ಒಟ್ಟು 18,599 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 695 ವಿದ್ಯಾರ್ಥಿಗಳು ಮಾತ್ರ ಅನುತ್ತೀರ್ಣರಾಗಿದ್ದಾರೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
ಜಿಲ್ಲೆಯಲ್ಲಿ 2461 ವಿದ್ಯಾರ್ಥಿಗಳು ಎ + ಶ್ರೇಣಿ, 5,036 ವಿದ್ಯಾರ್ಥಿಗಳು ಎ ಶ್ರೇಣಿ, 5,128 ವಿದ್ಯಾರ್ಥಿಗಳು ಬಿ+ ಶ್ರೇಣಿ, 3881 ವಿದ್ಯಾರ್ಥಿಗಳು ಬಿ ಶ್ರೇಣಿ, 1946 ವಿದ್ಯಾರ್ಥಿಗಳು ಸಿ+ ಶ್ರೇಣಿ, 147 ವಿದ್ಯಾರ್ಥಿಗಳು ಸಿ ಶ್ರೇಣಿಯಲ್ಲಿ ಉತ್ತೀರ್ಣಿರಾಗಿದ್ದಾರೆ. ಇಬ್ಬರು ವಿದ್ಯಾರ್ಥಿನಿಯರು 625ಕ್ಕೆ 624 ಅಂಕ ಗಳಿಸಿದ್ದರೆ, ಮೂವರು ವಿದ್ಯಾರ್ಥಿನಿಯರು 623 ಅಂಕಗಳನ್ನು ಪಡೆದಿದ್ದಾರೆ. ಒಟ್ಟು 8 ವಿದ್ಯಾರ್ಥಿಗಳು 622 ಅಂಕಗಳನ್ನು ಪಡೆಯುವ ಮೂಲಕ ಶಾಲೆಗೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಕಳೆದ ವರ್ಷದ ಫಲಿತಾಂಶದಲ್ಲಿ ಜಿಲ್ಲೆಯ 19 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆದುಕೊಂಡಿದ್ದರು.
ಫಲಿತಾಂಶ ತೃಪ್ತಿ ತಂದಿದೆ: ಡಿಡಿಪಿಐ
ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ತೃಪ್ತಿ ತಂದಿದೆ. ಕಳೆದ ಬಾರಿಗಿಂತ ಈ ಬಾರಿ ಶೇಕಡವಾರು ಅಂಕ ಗಳಿಕೆಯಲ್ಲಿ ಹೆಚ್ಚಿಗೆಯಾಗಿದೆ. ಆದರೆ ಸಣ್ಣ ಅಂತರದಲ್ಲಿ ಮೊದಲನೇ ಸ್ಥಾನ ಕೈತಪ್ಪಿದೆ. ಆದರೂ ಕೂಡ ಈ ಬಾರಿ ಫಲಿತಾಂಶ ತೃಪ್ತಿ ತಂದಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪ್ರಕಾಶ್ ತಿಳಿಸಿದರು.
ನಿರೀಕ್ಷೆಯಂತೆ ಅಂಕ ಬಂದಿದೆ: ನಮೀಕ್ಷಾ
ನಮ್ಮ ಶಾಲೆಯಲ್ಲಿ ಎಲ್ಲಾ ಶಿಕ್ಷಕರು ಉತ್ತಮವಾಗಿ ಪಾಠ ಮಾಡುವುದರ ಜತೆಗೆ ಪರೀಕ್ಷೆಗೆ ಯಾವ ರೀತಿ ಸಿದ್ಧತೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದರಿಂದ ನಾನು ಇಷ್ಟು ಅಂಕ ಗಳಿಸಲು ಸಾಧ್ಯವಾಯಿತು. ನನ್ನ ನಿರೀಕ್ಷೆಯಂತೆ ಅಂಕ ಬಂದಿದ್ದು ತುಂಬಾ ಸಂತೋಷವಾಗಿದೆ ಎಂದು ಎಚ್.ಎಸ್. ನಮೀಕ್ಷಾ ಸಂತಸ ವ್ಯಕ್ತಪಡಿಸಿದರು
ನಾನು ಪ್ರತಿದಿನ ಐದು ಗಂಟೆಗೆ ಎದ್ದು ಅಂದಿನ ಪಾಠವನ್ನು ಅಂದೇ ಓದುತ್ತಿದ್ದೆ. ಪಾಠದಲ್ಲಿ ಏನಾದರೂ ಗೊಂದಲಗಳಿದ್ದರೆ ಅದನ್ನ ಶಿಕ್ಷಕರೊಂದಿಗೆ ಬಗೆಹರಿಸಿಕೊಳ್ಳುತ್ತಿದ್ದೆ. ಶಾಲೆಯ ಶಿಕ್ಷಕರು ಹೆಚ್ಚು ಸಹಕಾರ ನೀಡಿದರು. ಅದೇ ರೀತಿ ಪೋಷಕರು ಕೂಡ ನನಗೆ ಪ್ರೇರಣೆ ನೀಡಿದ್ದರಿಂದ ಇಷ್ಟು ಅಂಕ ಗಳಿಸಲು ಸಾಧ್ಯವಾಯಿತು ಎಂದರು.
ನಮ್ಮ ತಂದೆ ದಿ. ಎಚ್.ಎಂ. ಶಿವಣ್ಣ, ತಾಯಿ ವಿ.ಸಿ. ಬಾಲಮಣಿ ಅವರು ಪೋಸ್ಟ್ ಮಾಸ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಫಲಿತಾಂಶ ಮನೆಯ ಎಲ್ಲರಿಗೂ ಸಂತೋಷ ತಂದಿದೆ. ಮುಂದೆ ಇಂಜಿನಿಯರ್ ಆಗಬೇಕೆಂಬ ಆಸೆ ಇದೆ. ಆ ನಿಟ್ಟಿನಲ್ಲಿ ಈಗಾಗಲೇ ಗಮನ ಹರಿಸುತ್ತಿದ್ದೇನೆ. ನನಗೆ ಇಷ್ಟು ಅಂಕ ಬರಲು ಸಹಕರಿಸಿದಂತಹ ಶಾಲೆಯ ಶಿಕ್ಷಕರು ಮತ್ತು ಎಲ್ಲರಿಗೂ ತುಂಬು ಹೃದಯದ ಧನ್ಯವಾದ ತಿಳಿಸುವುದಾಗಿ ಹೇಳಿದರು.
ವಿದ್ಯಾರ್ಥಿನಿ ಸಾಧನೆ ಖುಷಿ ತಂದಿದೆ: ಹೋಲಿ ಚಿಲ್ಡ್ರನ್ ಶಾಲೆ ಕಾರ್ಯದರ್ಶಿ
ನಮ್ಮ ಶಾಲೆಯಲ್ಲಿ ಈ ಬಾರಿ 54 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅವರಲ್ಲಿ 28 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಹಾಗೂ ಉಳಿದವರು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇವರಲ್ಲಿ ಎಚ್.ಎಸ್. ನಮೀಕ್ಷಾ ಎಂಬ ವಿದ್ಯಾರ್ಥಿನಿ 623 ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಗೆ ಎರಡನೇ ಸ್ಥಾನ ಪಡೆದುಕೊಂಡಿರುವುದು ನನಗೆ ಮತ್ತು ನಮ್ಮ ಸಂಸ್ಥೆಗೆ ಸಂತಸ ತಂದಿದೆ ಎಂದು ಜಯನಗರದ ಹೋಲಿ ಚಿಲ್ಡ್ರನ್ ಶಾಲೆಯ ಕಾರ್ಯದರ್ಶಿ ಗಿರೀಶ್‌ಗೌಡ ಹೇಳಿದರು.
ಕಳೆದ ಬಾರಿ ಕೂಡ ನಮ್ಮ ಶಾಲೆಯ ವಿದ್ಯಾರ್ಥಿ 624 ಅಂಕ ಪಡೆದಿದ್ದರು. ಈ ಬಾರಿಯೂ ಕೂಡ ಅದೇ ನಿರೀಕ್ಷೆ ಇತ್ತು. ಆದರೆ ಒಂದು ಅಂಕ ಕಡಿಮೆಯಾಯಿತು. ಶಾಲೆಯ ಎಲ್ಲ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ನಮ್ಮೆಲ್ಲ ಶಿಕ್ಷಕ ವರ್ಗದವರು ಉತ್ತಮವಾಗಿ ತರಗತಿಗಳನ್ನು ತೆಗೆದುಕೊಂಡು ಪರೀಕ್ಷೆಗೆ ಉತ್ತಮ ರೀತಿಯಲ್ಲಿ ವಿದ್ಯಾರ್ಥಿಗಳನ್ನು ತಯಾರು ಮಾಡಿದ್ದರು. ಅದರ ಫಲವಾಗಿ ನಮ್ಮ ಶಾಲೆ ಈ ಬಾರಿ ಶೇ.100ರಷ್ಟು ಫಲಿತಾಂಶ ಪಡೆಯಲು ಸ್ಯಾಧ್ಯವಾಯಿತ್ತು ಎಂದು ಸಂತೋಷಪಟ್ಟರು