ಎಸ್‌ಎಸ್‌ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಕೆ

ಎಸ್‌ಎಸ್‌ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಕೆ
Published on

ಹಾಸನ: ನಗರದ ಎಸ್‌ಎಸ್‌ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು ರೋಗಿಯ ಆರೋಗ್ಯದ ಮೇಲೆ ನಿಗಾ ಇಡುವ ಆಧುನಿಕ ರಿಮೋಟ್ ಮಾನಿಟರಿಂಗ್ ತಂತ್ರಜ್ಞಾನ ಅಳವಡಿಕೆಗೆ ಚೈನೈ ಮೂಲದ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಆಸ್ಪತ್ರೆ ಸಿಇಒ ಡಾ.ವಿನಾಯಕ್ ನಾರಾಯಣ ತಿಳಿಸಿದರು.
ಆಧುನಿಕ ತಂತ್ರಜ್ಞಾನದ ಮೂಲಕ ರೋಗಿಗಳಿಗೆ ಮತ್ತಷ್ಟು ಹತ್ತಿರವಾಗಲು ಎಸ್‌ಎಸ್‌ಎಂ ಬಯಸುತ್ತಿದೆ. ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾದ ಜಿಲ್ಲೆಯ ಪ್ರಥಮ ಆಸ್ಪತ್ರೆ ಎಂಬ ಹೆಗ್ಗಳಿಕೆಗೂ ಭಾಜನವಾಗಿದೆ. ರೋಗಿಗಳು ಚಿಕಿತ್ಸೆ ಬಳಿಕ ಮನೆಗೆ ವಾಪಾಸ್ಸಾದ ಬಳಿಕವೂ ಆರೋಗ್ಯದ ಮೇಲೆ ನಿಗಾ ಇಡುವ ತಂತ್ರಜ್ಞಾನವನ್ನು ಚೈನೈ ಮೂಲದ ಹೆಲ್ತ್-ಟೆಕ್ ಸ್ಟಾರ್ಟ್ ಅಪ್ ಲೈಫ್ ಸೈನ್ಸ್ ಸಂಸ್ಥೆಯ ಜೊತೆ ಹೊಂದಾಣಿಕೆ ಮಾಡಿಕೊಂಡು ವೈರ್‌ಲೆಸ್ ಬಯೋಸೆನ್ಸಾರ್ ಪೂರೈಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಆಸ್ಪತ್ರೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬಯೋ ಸೆನ್ಸಾರ್ ಎಂಬುದು ಚಿಕ್ಕ ಗಾತ್ರದ ಸಾಧನವಾಗಿದ್ದು, ಐದರಿಂದ ಆರು ದಿನಗಳ ವರೆಗೆ ಇದರ ಬಾಳಿಕೆ ಬರುತ್ತದೆ. ಮೊಬೈಲ್‌ಗಳು ಯಾವ ರೀತಿ ವೈಫೈ, ಬ್ಲೂಟೂತ್ ಮೂಲಕ ಕಾರ್ಯನಿರ್ವಹಿಸುತ್ತದೆಯೋ ಅದೇ ರೀತಿ ಬಯೋಸೆನ್ಸಾರ್ ಕೆಲಸ ಮಾಡುತ್ತದೆ. ಇಸಿಜಿ, ನಾಡಿ ಮಿಡಿತ ಮಾಹಿತಿ, ದೇಹದ ಉಷ್ಣತೆ, ಹೃದಯ ಬಡಿತ, ದೇಹದ ಭಂಗಿ, ರಕ್ತದೊತ್ತಡ ಮತ್ತು ಎಸ್‌ಪಿಒ2 ನಂತಹ ನಿರ್ಣಾಯಕ ಮಾಹಿತಿಗಳನ್ನು ನಿರಂತರವಾಗಿ ದಾಖಲು ಮಾಡಿಕೊಂಡು ಆಸ್ಪತ್ರೆಗೆ ರವಾನಿಸುತ್ತದೆ. ಇದರಿಂದ ರೋಗಿಗೆ ಕೈಗೊಳ್ಳಬಹುದಾದ ಚಿಕಿತ್ಸಾ ಕ್ರಮವನ್ನು ಮೊದಲೇ ಅರಿತಂತೆ ಆಗುತ್ತದೆ. ಇದರಿಂದ ರೋಗಿಯ ಸಮಯ ಹಾಗು ವೆಚ್ಚವನ್ನು ನಿಯಂತ್ರಿಸಬಹುದು. ರೋಗಿಯ ಸ್ಥಿತಿ ಹದಗೆಟ್ಟ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಮೊದಲೇ ಅರಿಯಲು ಬಯೋಸೆನ್ಸಾರ್ ನೆರವಾಗುತ್ತದೆ ಎಂದು ಮಾಹಿತಿ ನೀಡಿದರು.
ಎಸ್‌ಎಸ್‌ಎಂ ಆಸ್ಪತ್ರೆ ಉಪನಿರ್ದೇಶಕಿ ಶ್ರೀವಿದ್ಯಾ ಮಾತನಾಡಿ, ಕಳೆದ ಮೂರು ದಶಕಗಳಿಂದ ಹಾಸನ ಹಾಗು ಸುತ್ತಲಿನ ಜಿಲ್ಲೆಯ ಜನರಿಗೆ ಆಸ್ಪತ್ರೆ ಉತ್ತಮ ಸೇವೆ ನೀಡುತ್ತಿದೆ. ಬಯೋಸೆನ್ಸಾರ್ ಅಳವಡಿಕೆ ಕುರಿತು ಸಾಕಷ್ಟು ಚರ್ಚೆ ನಡೆದು ಅಂತಿಮವಾಗಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರಿಂದ ರೋಗಿಗಳಿಗೆ ಅನುಕೂಲವಾಗುವ ವಿಶ್ವಾಸ ಇದೆಯೆಂದರು.
ಲೈಫ್ ಸೈನ್ಸ್ ಸಹ-ಸಂಸ್ಥಾಪಕ ಡಾ.ಗಿರೀಶ್ ಚಂದ್ರ ಮಾತನಾಡಿ, ಈ ಸಾಧನದ ಬೆಲೆ 800 ರಿಂದ 1 ಸಾವಿರ ರೂ. ಆಗಿದ್ದು, ಬೇಡಿಕೆ ಹೆಚ್ಚಾದರೆ ಮುಂದಿನ ದಿನಗಳಲ್ಲಿ ದರ ಕಡಿಮೆಯಾಗಬಹುದು. ಬಯೋಸೆನ್ಸಾರ್ ನಿಯಂತ್ರಣಕ್ಕಾಗಿಯೇ ಪ್ರತ್ಯೇಕ ಸಿಬ್ಬಂದಿ ನಿಯೋಜಿಸಿ ಮೇಲ್ವಿಚಾರಣೆ ವಹಿಸಿದರೆ ಅದರ ಅನುಕೂಲತೆ ಹೆಚ್ಚಿನ ಜನರಿಗೆ ತಲುಪುತ್ತದೆ. ಆಸ್ಪತ್ರೆಯ ಐಸಿಯು ವಾಡ್ನಿರ್ಂದ ಸಾಮಾನ್ಯ ಕೊಠಡಿಗೆ ರವಾನಿಸುವ ರೋಗಿಗೆ ಇದನ್ನು ಅಳವಡಿಸಿದರೆ ಕಾಯಿಲೆಯ ಸ್ಥಿತಿಗತಿಯನ್ನು ಸುಲಭವಾಗಿ ಅರಿಯಬಹುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಹಿಮ್ಸ್ ನಿರ್ದೇಶಕ ಡಾ.ಸಂತೋಷ್, ಡಾ.ಸೋಮನಾಥ, ಡಾ.ಅಭಿನಂದನ್, ಡಾ.ಅಭಿಲಾಷ್, ಡಾ.ಹರ್ಷ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net