

ಹಾಸನ: ನಗರದ ಪ್ರತಿಷ್ಠಿತ ಎಸ್‌ಎಸ್‌ಎಂ ಆಸ್ಪತ್ರೆಯು ಜಿಲ್ಲೆಯ ಮುಂಚೂಣಿ ಆರೋಗ್ಯ ಸಂಸ್ಥೆಯಾಗಿದ್ದು ಕೈಗೆಟಕುವ ದರದಲ್ಲಿ ಮತ್ತು ಗುಣಮಟ್ಟದ ಸೇವೆಗಳಿಗೆ ಬದ್ಧವಾಗಿದೆ. ಈ ಮೂಲಕ ಸುಮಾರು ಎರಡು ದಶಕಗಳಿಂದ ಜನ ಸಮುದಾಯದ ವಿಶ್ವಾಸ ಪಡೆದುಕೊಂಡಿದೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಸೌಮ್ಯಾ ದಿನೇಶ್ ಹೇಳಿದರು.
ನಗರದ ಎಸ್‌ಎಸ್‌ಎಮ್ ಆಸ್ಪತ್ರೆಯ ಸಂಸ್ಥಾಪಕ ವೈದ್ಯ ಡಾ. ದಿನೇಶ್ ಅವರ ಜನ್ಮ ದಿನದ ಅಂಗವಾಗಿ ಬುಧವಾರ ಆಯೋಜಿಸಿದ್ದ ಸಂಸ್ಥೆಯ 24ನೇ ಸಂಸ್ಥಾಪಕರ ದಿನಾಚರಣೆ ಆಚರಿಸಲಾಯಿತು. ಸಮಾರಂಭದಲ್ಲಿ ಹಾಸನ ಮತ್ತು ಕೊಡಗು ಜಿಲ್ಲೆಯ ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿ ಶ್ರೀ ಶಂಭುನಾಥ ಸ್ವಾಮೀಜಿ ದಿವ್ಯ ಸಾನಿದ್ಯವನ್ನು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕ ಎಚ್.ಡಿ. ರೇವಣ್ಣ ಅವರು, ಡಾ. ದಿನೇಶ್ ಅವರು ಸ್ಥಾಪಿಸಿದ ಈ ಆಸ್ಪತ್ರೆ ಹಾಸನ ಜಿಲ್ಲೆಯ ವೈದ್ಯಕೀಯ ಕ್ಷೇತ್ರದ ಗಮನಾರ್ಹ ಕೊಡುಗೆ ನೀಡಿದೆ. ಮುಂದಿನ ದಿನಗಳಲ್ಲಿ ಡಾ.ಸೌಮ್ಯಾ ದಿನೇಶ್ ಅವರ ಸಾರಥ್ಯದಲ್ಲಿ ಇನ್ನೂ ಹೆಚ್ಚಿನ ಸೇವೆಗಳನ್ನು ಎಲ್ಲಾ ವರ್ಗದ ಜನರಿಗೆ ಅನುಕೂಲ ದರದಲ್ಲಿ ಒದಗಿಸುವಂತೆ ತಿಳಿಸಿದರು.
ಡಿಎಚ್‌ಒ ಡಾ.ಅನಿಲ್ ಮಾತನಾಡಿ, ಆವಿಷ್ಕಾರದ ಬದ್ಧತೆಯಿಂದ ಪ್ರೇರಿತವಾದ ಎಸ್‌ಎಸ್‌ಎಂ ಆಸ್ಪತ್ರೆಯು ಹಲವಾರು ಸ್ಪೆಷಾಲಿಟಿ ಮತ್ತು ಸೂಪರ್ ಸ್ಪೆಷಾಲಿಟಿ ಸೇವೆಗಳನ್ನು ಹಾಸನ ಜನತೆಗೆ ಸಲ್ಲಿಸಿದೆ ಎಂದು ತಿಳಿಸಿದರು.
ಐಎಂಎ ಜಿಲ್ಲಾಧ್ಯಕ್ಷ ಡಾ. ದೇವದಾಸ ಅವರು ಮಾತನಾಡಿ, ಎಸ್‌ಎಸ್‌ಎಂ ಆಸ್ಪತ್ರೆಯು ಡಾ. ದಿನೇಶ್ ಅವರ ಕನಸಿನ ಕೂಸು. ಅವರ ದೂರದೃಷ್ಟಿ ಮತ್ತು ಸಮಾಜಮುಖಿ ಧ್ಯೇಯಗಳಿಂದ ಸಂಸ್ಥೆ ಇಂದು ಬಡಜನರಿಗೆ ನಗರದಲ್ಲಿಯೇ ಅತ್ಯುತ್ತಮ ಸೇವೆಗಳನ್ನು ಒದಗಿಸುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪನಿರ್ದೇಶಕರಾದ ಡಾ. ಎನ್.ಬಿ. ಶ್ರೀವಿದ್ಯಾ, ಸಂಸ್ಥೆಯ ಸಿಇಒ ಡಾ. ಎನ್. ವಿನಾಯಕ್ ಇದ್ದರು.