

ಚಿತ್ರದುರ್ಗ: ಕರ್ನಾಟಕ ಏಕೀಕರಣದ ರುವಾರಿ, ರಾಷ್ಟ್ರನಾಯಕ ಎಸ್.ನಿಜಲಿಂಗಪ್ಪ ಅವರು ಮುರುಘಾಮಠದ ಪಾರಂಪರಿಕ ಭಕ್ತರಾಗಿದ್ದರು ಎಂದು ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಬಸವಕುಮಾರ ಶ್ರೀ ಬಣ್ಣಿಸಿದರು.
ಸೀಬಾರ ಸಮೀಪದ ಎಸ್‌ಎನ್ ಅವರ ಸ್ಮಾರಕದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಎಸ್.ನಿಜಲಿಂಗಪ್ಪ ಅವರ 123ನೇ ಜನ್ಮದಿನಾಚರಣೆಯ ಸಾನ್ನಿಧ್ಯವಹಿಸಿ ಮಾತನಾಡಿದರು.
ಮುರುಘಾಮಠದ ಜಯದೇವ ಶ್ರೀ ಅವರೊಂದಿಗೂ ಅವಿನಾಭಾವ ಸಂಬಂಧವಿತ್ತು. ಅಪರೂಪದ ರಾಜಕಾರಣಿ. ಕನ್ನಡ ನಾಡು, ನುಡಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.
ನೇರ, ನಿಷ್ಟುರವಾದಿ, ನಿಷ್ಕಳಂಕ ರಾಜಕಾರಣಿಯಾಗಿದ್ದ ಅವರ ಆಚಾರ-ವಿಚಾರಗಳನ್ನು ಪಠ್ಯದಲ್ಲಿ ಸೇರಿಸಿ ಪ್ರಸ್ತುತ ಯುವಸಮೂಹಕ್ಕೆ ಪರಿಚಯಿಸಬೇಕು. ಮಹನೀಯರ ತತ್ವಾದರ್ಶ ಸಮಾಜಕ್ಕೆ ತಿಳಿಸದಿದ್ದರೆ, ಅದು ಸಾಂಸ್ಕೃತಿಕ ದರಿದ್ರ ಎಂದರು.
ಎಸ್.ಎನ್.ಮೆಮೋರಿಯಲ್ ಟ್ರಸ್ಟ್ನ ಗೌರವ ಕಾರ್ಯದರ್ಶಿ ಎಚ್.ಹನುಮಂತಪ್ಪ ಮಾತನಾಡಿ, ಎಸ್‌ಎನ್ ಅವರ ವ್ಯಕ್ತಿತ್ವ ದೊಡ್ಡದು. ಪಾರದರ್ಶಕವಾಗಿದ್ದ ಕಾರಣ ಭ್ರಷ್ಟಾಚಾರದಿಂದ ದೂರವಿದ್ದರು. ವಕೀಲ ವೃತ್ತಿಯಿಂದ ಗಳಿಸಿದ
ಸಂಪಾದನೆಯಲ್ಲಿ ನಿರ್ಮಿಸಿಕೊಂಡ ಮನೆಯಲೇ ಕೊನೆಯವರೆಗೂ ಜೀವಿಸಿದರು. ಸರ್ಕಾರದ ಬಂಗಲೆ ಪಡೆದುಕೊಳ್ಳಲಿಲ್ಲ. ಅಷ್ಟೊಂದು ಸ್ವಾವಲಂಬನೆ ಅವರಲ್ಲಿತ್ತು ಎಂದು ಬಣ್ಣಿಸಿದರು.
ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀ, ಬಸವನಾಗಿದೇವ ಶ್ರೀ ಸಾನ್ನಿಧ್ಯ ವಹಿಸಿದ್ದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ವೀರೇಶ್, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಪಾಪಯ್ಯ, ಟ್ರಸ್ಟ್‌ನ ಟ್ರಸ್ಟಿ ಎಸ್.ಷಣ್ಮುಖಪ್ಪ, ಗುರುಮೂರ್ತಿ, ಎಸ್.ವೀರೇಶ್, ಕೆ.ವಿ.ಶಂಕರಪ್ಪ, ಎಂವಿಎಂ ಸ್ವಾಮಿ, ಕೆ.ಸಿ.ರುದ್ರೇಶ್, ಲೋಕನಾಥ್, ರುದ್ರಮೂರ್ತಿ, ಮಂಜುನಾಥ್, ವೀರಭದ್ರಸ್ವಾಮಿ, ಇಟಗಿ ಜಯದೇವಮೂರ್ತಿ, ಮುರುಗೇಶ್, ಅನಿತಾ ಮುರುಗೇಶ್ ಇತರರಿದ್ದರು.