

ಹಾಸನ: ನಗರದ ಎಸ್‌ಆರ್‌ಎಸ್ ಪ್ರಜ್ಞಾ ವಿದ್ಯಾಶಾಲೆಯಲ್ಲಿ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಶಾಲೆಯ ಎಲ್ಲ ವಿದ್ಯಾರ್ಥಿಗಳು ಸೂರ್ಯ ನಮಸ್ಕಾರದೊಂದಿಗೆ 11ನೇ ಅಂತರಾಷ್ಟ್ರೀಯ ಯೋಗ ದಿನಕ್ಕೆ ಚಾಲನೆ ನೀಡಿ, ಶಾಲೆಯ ಯೋಗ ಶಿಕ್ಷಕರ ಮಾರ್ಗದರ್ಶನದಲ್ಲಿ ಸುಮಾರು 1 ಗಂಟೆಯ ಕಾಲ ಶಾಲೆಯ ಒಳ ಹಾಗೂ ಹೊರಾಂಗಣದಲ್ಲಿ ವಿವಿಧ ಆಸನಗಳನ್ನು ಪ್ರದರ್ಶಿಸಿದರು.
ನಂತರ ಶಾಲಾ ಸಭಾಂಗಣದಲ್ಲಿ ಜರುಗಿದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಯೋಗ ತರಬೇತುದಾರ ಸುರೇಶ್ ಕುಮಾರ್ ಪ್ರಜಾಪತಿ ಅವರು ಸಭಾ ಕಾರ್ಯಕ್ರಮ ಉದ್ಘಾಟಿಸಿ, ಯೋಗ ಪದದ ಅರ್ಥವನ್ನು ವ್ಯಾಖ್ಯಾನಿಸಿ, ಅದರ ಮಹತ್ವ ಮತ್ತು ಅದರಿಂದ ದೇಹಕ್ಕಾಗುವ ಪ್ರಯೋಜನಗಳನ್ನು ಮಕ್ಕಳಿಗೆ ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು.
ಯೋಗ ಎಂಬುದು ಶರೀರ ಮತ್ತು ಮನಸ್ಸನ್ನು ಒಗ್ಗೂಡಿಸಿ ಒಂದನ್ನೊಂದು ಬೆಸೆಯುವ ವಿಜ್ಞಾನವಾಗಿದೆ. ನಮ್ಮ ಶರೀರ ಹಾಗೂ ಮನಸ್ಸುಗಳು ಒಂದು ನಾಣ್ಯದ ಎರಡು ಮುಖಗಳಂತಿದ್ದು ಅವೆರಡನ್ನು ಕೇಂದ್ರೀಕರಿಸಿ ಏಕಾಗ್ರತೆಯ ಕಡೆಗೆ ಒಯ್ಯುವಲ್ಲಿ ಯೋಗದ ಪಾತ್ರ ಮಹತ್ವದ್ದಾಗಿದೆ. ಪ್ರತಿಯೊಬ್ಬರು ಜೀವನದಲ್ಲಿ ಶಾಂತಿ, ನೆಮ್ಮದಿ, ಉತ್ತಮ ಆರೋಗ್ಯ, ಯಶಸ್ಸು ಹಾಗೂ ಮನೋಲ್ಲಾಸಗಳೆಲ್ಲವೂ ಕೈಗೂಡಬೇಕೆಂದರೆ ಯೋಗದ ಅಭ್ಯಾಸ ಮಾಡುವುದು ಇಂದಿನ ಒತ್ತಡದ ಬದುಕಿನಲ್ಲಿ ಅತ್ಯಾಪ್ತವೆನಿಸುತ್ತದೆ. ಮಕ್ಕಳಾದ ನೀವೆಲ್ಲರೂ ಎಳೆಯ ವಯಸ್ಸಿನಿಂದಲೇ ಯೋಗವನ್ನು ರೂಢಿಸಿಕೊಳ್ಳುವುದರಿಂದ ಮನೋದೈಹಿಕ ಕೌಶಲ ವೃದ್ಧಿಗೆ ಸಹಕಾರಿಯಾಗಿ ವಿದ್ಯಾರ್ಜನೆಯಲ್ಲಿ ಗಮನಾರ್ಹ ಸಾಧನೆ ಮಾಡಬಹುದೆಂದು ತಿಳಿಸಿಕೊಟ್ಟರು.
ಸಂಸ್ಥೆಯ ಅಧ್ಯಕ್ಷರಾದ ರಾಜಗೋಪಾಲ ಶೆಟ್ಟಿ ಮಾತನಾಡಿ, ಆರೋಗ್ಯವೇ ಭಾಗ್ಯ ಎಂಬಂತೆ ನಮ್ಮ ಎಲ್ಲ ಸಾಧನೆಗೆ ಉತ್ತಮ ಆರೋಗ್ಯವೇ ಮೂಲಮಂತ್ರವಾಗಿದೆ. ಯೋಗ ವಿಶ್ವಕ್ಕೆ ಭಾರತದ ಅತ್ಯಮೂಲ್ಯ ಕೊಡುಗೆ. ಯೋಗವು ನಮ್ಮ ಉತ್ತಮ ಜೀವನ ಶೈಲಿ, ಸ್ಥಿತ ಪ್ರಜ್ಞೆ ಮತ್ತು ಸದೃಢ ಆರೋಗ್ಯವನ್ನು ಉತ್ತಮವಾಗಿಸುವ ವಿಶೇಷ ಕಲೆಯಾಗಿದೆ. ಪ್ರತಿನಿತ್ಯ ಯೋಗ ಮಾಡಿದರೆ ನಮ್ಮ ದೇಹ ಮತ್ತು ಮನಸ್ಸು ಕ್ರಿಯಾಶೀಲವಾಗಿರುತ್ತದೆ. ಮಕ್ಕಳಾದ ನೀವೆಲ್ಲರು ಕ್ರಮಬದ್ಧ ಹಾಗೂ ನಿಯಮಿತ ಯೋಗಾಭ್ಯಾಸವನ್ನು ಚಿಕ್ಕಂದಿನಿಂದಲೇ ಮಾಡುವುದರಿಂದ ಸದೃಢ ಹಾಗೂ ಆರೋಗ್ಯವಂತರಾಗಬಹುದು ಎಂದು ಅಭಿಪ್ರಾಯಪಟ್ಟರು.
ಮಕ್ಕಳು ಯೋಗದ ಮಹತ್ವದ ಬಗ್ಗೆ ಪಿಪಿಟಿ, ಸಮೂಹ ಗಾಯನ, ಭಾಷಣಗಳು ಹಾಗೂ ಯೋಗಾಸನಗಳ ಪಿರಮಿಡ್‌ಗಳ ಪ್ರದರ್ಶನ ನೀಡಿ ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಎಂ.ನಟರಾಜ್, ಆಡಳಿತ ಮಂಡಳಿಯ ಸದಸ್ಯೆ ಆಶಾ ನಟರಾಜ್, ಶಾಲಾ ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.