

ಬೇಲೂರು: ನೂತನ ಬಡಾವಣೆಗಾಗಿ ಪಟ್ಟಣ ಸಮೀಪದ ಎಸ್.ಸೂರಾಪುರ ಗ್ರಾಮದಲ್ಲಿ ಖಾಸಗಿ ವ್ಯಕ್ತಿಗಳು ಕಾಮಗಾರಿಯಲ್ಲಿ ಸಂದರ್ಭ ಬಂಡೆ ಸಿಡಿಸಿರುವುದರಿಂದ ಹಲವು ಮನೆಗಳಿಗೆ ಹಾನಿಯಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ಗುರುವಾರ ಕಾಮಗಾರಿ ಸ್ಥಳದಲ್ಲೇ ಪ್ರತಿಭಟನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.
ಎಸ್.ಸೂರಾಪುರ ಗ್ರಾಮದ ಮುಖಂಡ ಲೋಕೇಶ್ ಮಾತನಾಡಿ, ಎಸ್.ಸೂರಾಪುರ ಗ್ರಾಮದ 108ನೇ ಸರ್ವೇ ನಂಬರ್‌ನಲ್ಲಿ ಎರಡು ಎಕರೆ ಜಾಗದಲ್ಲಿ ಖಾಸಗಿ ವ್ಯಕ್ತಿಗಳು ನೂತನ ಬಡಾವಣೆ ನಿರ್ಮಿಸಿ ನಿವೇಶನ ಮಾಡಲು ಮುಂದಾಗಿದ್ದು, ಇದಕ್ಕಾಗಿ ಸರ್ಕಾರಿ ರಸ್ತೆಯಲ್ಲಿ ಒಳ ಚರಂಡಿಗಾಗಿ ಇಪ್ಪತ್ತು ಅಡಿ ಆಳದಲ್ಲಿ ಮಣ್ಣು ತೆಗೆಯುತ್ತಿದ್ದಾರೆ. ಆದರೆ ಇದರ ಮದ್ಯದಲ್ಲಿ ಸಿಕ್ಕ ಬೃಹತ್ ಗಾತ್ರದ ಕಲ್ಲು ಬಂಡೆ ತೆಗೆಯಲು ಸಿಡಿಮದ್ದು ಬಳಸಿದ್ದಾರೆ. ಇದರಿಂದ ಸಮೀಪದಲ್ಲಿದ್ದ 15ಕ್ಕೂ ಹೆಚ್ಚಿನ ಮನೆಗಳಿಗೆ ಹಾಗೂ ಎರಡು ದೇವಸ್ಥಾನಗಳ ಗೋಡೆಗಳಿಗೆ ಹಾನಿಯಾಗಿ ಬಿರುಕು ಬಿಟ್ಟಿರುವುದರಿಂದ ಹಾನಿಯಾದ ಮನೆಗಳ ಮಾಲೀಕರಿಗೆ ದುರಸ್ತಿಗಾಗಿ ಪರಿಹಾರ ನೀಡಬೇಕು ಹಾಗೂ ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಗ್ರಾಮದ ರಮೇಶ್ ಮಾತನಾಡಿ, ನೂತನ ಬಡಾವಣೆ ನಿರ್ಮಿಸಿ ಒಳ ಚರಂಡಿಗೆಂದು ಬಂಡೆ ಸಿಡಿಸಲು ಸಿಡಿಮದ್ದು ಬಳಸಲಾಗಿದೆ. ಇದರಿಂದ ಮನೆಗಳಿಗೆ ಹಾನಿಯಾದರೆ ಪಕ್ಕದಲ್ಲೇ ಇರುವ ಯಗಚಿ ಜಲಾಶಯಕ್ಕೆ ಹಾನಿಯಾದರೆ ಯಾರು ಹೊಣೆ. ಪುನಃ ಸಿಡಿಮದ್ದುಗಳನ್ನು ಬಳಸಿದ ಸಂದರ್ಭ ಹೆಚ್ಚಿನ ಅನಾಹುತಗಳಾಗುವ ಸಂಭವವಿದ್ದು, ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಎಚ್ಚೆತ್ತು ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ತಾಲೂಕು ಕಚೇರಿ ಮುಂಭಾಗ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಸುನಿತಾ, ಪರಶುರಾಮ್, ರವಿ, ಪಾಪಣ್ಣ, ತುಂಗಾ, ಮಮತಾ, ಜಯಂತಿ, ಕೋಮಲಾ, ಧರ್ಮವತಿ, ಕೇಶವಮೂರ್ತಿ, ಶೇಖರ, ರಾಜೇಗೌಡ ಇತರರು ಪಾಲ್ಗೊಂಡಿದ್ದರು.