

ನಂಜನಗೂಡು: ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ.ಬಸವರಾಜು ಅವರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡುವಂತೆ ಆಗ್ರಹಿಸಿ ಅವರ ಅಭಿಮಾನಿ ಬಳಗದವರು ಬೃಹತ್ ಸಭೆ ನಡೆಸಿ ಒತ್ತಾಯಿಸಿದರು.
ಸಭೆಯನ್ನುದ್ದೇಶಿಸಿ ನಾಯಕ ಸಮುದಾಯದ ಹಿರಿಯ ಮುಖಂಡ ನಾಗರಾಜು ಮಾತನಾಡಿ, ಎಸ್.ಸಿ.ಬಸವರಾಜು ಕಳೆದ 30 ವರ್ಷಗಳಿಂದಲೂ ಸಕ್ರಿಯ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದು ಜಿ.ಪಂ. ಅಧ್ಯಕ್ಷರಾಗಿ, ವಾಲ್ಮೀಕಿ ನಿಗಮದ ಅಧ್ಯಕ್ಷರಾಗಿ ಸೇವೆ ಸಲ್ಲಿಸುವುದರ ಜತೆಗೆ, ಕೆಪಿಸಿಸಿ ಕಾರ್ಯದರ್ಶಿಯಾಗಿ ಪಕ್ಷ ಸಂಘಟನೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಅವರ ಶ್ರಮದಿಂದಾಗಿ ಈ ಭಾಗದಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲು ಸಾಧ್ಯವಾಗಿದೆ. ಅಲ್ಲದೆ, ಈ ಭಾಗದಲ್ಲಿ ಡಿ.ಟಿ.ಜಯಕುಮಾರ್ ನಂತರ ನಾಯಕ ಜನಾಂಗಕ್ಕೆ ಯಾವುದೇ ರಾಜಕೀಯ ಸ್ಥಾನಮಾನ ಸಿಕ್ಕಿಲ್ಲ. ಆದ್ದರಿಂದ ಅವರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.
ಎಸ್.ಸಿ.ಬಸವರಾಜು ಅವರಿಗೆ ವಿಧಾನಪರಿಷತ್ ಸ್ಥಾನ ನೀಡಬೇಕೆಂದು ಆಗ್ರಹಿಸಿ ಸಾವಿರಾರು ಸಂಖ್ಯೆಯಲ್ಲಿ ನಾಯಕ ಸಮುದಾಯದ ನಿಯೋಗ ತೆರಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಒತ್ತಾಯಿಸಲು ತೀರ್ಮಾನಿಸಲಾಯಿತು.
ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ಹು.ಲಿ.ಚಾಮುಂಡನಾಯಕ, ಶಿವಕುಮಾರ್, ತಗಡೂರುನಾಯಕ, ಮಹದೇವನಾಯಕ, ಸೋಮೇಶ್, ಅರುಣ್, ಸೇರಿದಂತೆ ಎಸ್.ಸಿ.ಬಸವರಾಜು ಅಭಿಮಾನಿ ಬಳಗದ ನೂರಾರು ಮಂದಿ ಭಾಗವಹಿಸಿದ್ದರು.