

ಯಳಂದೂರು: ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎಸ್.ಜಯಣ್ಣ ನಿಧನರಾದ ಹಿನ್ನೆಲೆಯಲ್ಲಿ ಗುರುವಾರ ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶ್ರದ್ಧಾಂಜಲಿ ಸಭೆಯನ್ನು ಆಯೋಜಿಸಲಾಗಿತ್ತು.
2ನೇ ವಾರ್ಡಿನ ಪಪಂ ಸದಸ್ಯ ವೈ.ಜಿ. ರಂಗನಾಥ ಮಾತನಾಡಿ, ಎಸ್.ಜಯಣ್ಣ ಜನಾನುರಾಗಿ ರಾಜಕೀಯ ನಾಯಕರಾಗಿದ್ದರು. ಪಟ್ಟಣ ಪಂಚಾಯಿತಿ ನೂತನ ಕಚೇರಿ, ಪಟ್ಟಣದಲ್ಲಿ ರಸ್ತೆ ವಿಸ್ತರಣೆ ವೇಳೆ ಮನೆ ಕಳೆದುಕೊಂಡವರು ಬಡವರಾಗಿದ್ದ ಕಾರಣ ಅವರಿಗೆ ಪರ್ಯಾಯವಾಗಿ ನಿವೇಶನಗಳನ್ನು ನೀಡಿದ ಜಿಲ್ಲೆಯ ಏಕೈಕ ನಾಯಕರಾಗಿದ್ದರು, ಸದಾ ಬಡವರ ಪರ ಒಲವು ಹೊಂದಿದ್ದರು. ಇಂತಹ ನಾಯಕರನ್ನು ಕಳೆದುಕೊಂಡ ನಮ್ಮ ಜಿಲ್ಲೆ ಬಡವಾಗಿದೆ ಎಂದರು.
ನಾಮನಿರ್ದೇಶಿತ ಸದಸ್ಯ ಲಿಂಗರಾಜಮೂರ್ತಿ ಮಾತನಾಡಿ, ಎಸ್.ಜಯಣ್ಣ ಮೃದುಭಾಷಿಯಾಗಿದ್ದರು. ಇವರು ಸದಾ ಹಸನ್ಮುಖಿಯಾಗಿ ತಮ್ಮ ಕೆಲಸವನ್ನು ನಿರ್ವಹಿಸಿದರು. ಯಾವುದೇ ಕಪ್ಪು ಚುಕ್ಕೆ ಇಲ್ಲದ ಸಮರ್ಥ ನಾಯಕರಾಗಿದ್ದರು. ಜನರ ಕಷ್ಟಗಳಿಗೆ ಸ್ಪಂದಿಸುವ ಮಾತೃ ಹೃದಯ ಇವರಲ್ಲಿತ್ತು. ಅವರ ಅಗಲಿಕೆ ಕ್ಷೇತ್ರದ ಜನರಿಗೆ ತುಂಬಲಾರದ ನಷ್ಟವಾಗಿದೆ ಎಂದರು.
ಪಪಂ ಸದಸ್ಯ ಮಹೇಶ್, ಬಿ.ರವಿ, ಮಾಜಿ ಸದಸ್ಯ ಜೆ.ಶ್ರೀನಿವಾಸ್, ಜಯರಾಮು ಮಾತನಾಡಿದರು.
ನಾಮ ನಿರ್ದೇಶಿತ ಸದಸ್ಯರಾದ ಮುನಾವರ್ ಬೇಗ್, ಶ್ರೀಕಂಠಸ್ವಾಮಿ, ಮುಖಂಡರಾದ ಲಿಂಗರಾಜು, ರಿಜ್ವಾನ್, ಪ್ರಕಾಶ್, ಶಿವಣ್ಣ, ಮತ್ತಿತರರು ಹಾಜರಿದ್ದರು.