

ಹಾಸನ: ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶವನ್ನು ಉತ್ತಮ ಪಡಿಸಿ ರಾಜ್ಯ ಮಟ್ಟದಲ್ಲಿ ಉನ್ನತ ಸ್ಥಾನ ಪಡೆಯುವ ನಿಟ್ಟಿನಲ್ಲಿ ಪ್ರಾರಂಭ ದಿಂದಲೆ ನಿಗಾವಹಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಮಕ್ಕಳಿಗೆ ಪಠ್ಯ ಪುಸ್ತಕ ವಿತರಣೆ ಹಾಗೂ ಶೂ ಮತ್ತು ಸಾಕ್ಸ್ ಖರೀದಿಯಲ್ಲಿ ಗುಣಮಟ್ಟಕ್ಕೆ ಒತ್ತು ನೀಡುವಂತೆ ತಿಳಿಸಿದರಲ್ಲದೆ, ಯಾವುದೇ ದೂರುಗಳು ಬರದಂತೆ ನಿಗಾವಹಿಸಲು ಸೂಚನೆ ನೀಡಿದರು.
ಬಿಸಿಯೂಟದಲ್ಲಿ ಶಾಲಾ ಮಕ್ಕಳಿಗೆ ನಿಗದಿ ಪ್ರಮಾಣದಲ್ಲಿ ಆಹಾರ ನೀಡುವಂತೆ ನಿರ್ದೇಶನ ನೀಡಿದರಲ್ಲದೆ, ಶಾಲಾ ಆವರಣದಲ್ಲಿ ಪೌಷ್ಟಿಕ ಕೈತೋಟ ನಿರ್ಮಾಣಕ್ಕೆ ಗಮನಹರಿಸಿ.ಮಕ್ಕಳಿಗೆ ಆಶುಭಾಷಣ, ಚರ್ಚಾಸ್ಪರ್ಧೆ ಏರ್ಪಡಿಸುವ ಮೂಲಕ ಅವರಿಗೆ ಕಲಿಕೆಯ ಜತೆ ಇತರೆ ವಿಷಯಗಳ ಬಗ್ಗೆ ತಿಳಿಸುವಂತೆ ಎಂದು ತಿಳಿಸಿದ ಅವರು, ಶಾಲಾ ಆವರಣ, ಶೌಚಾಲಯ ಹಾಗೂ ಕೊಠಡಿಗಳ ಸ್ವಚ್ಚತೆಗೆ ಕ್ರಮವಹಿಸಲು ಸೂಚನೆ ನೀಡಿದರು.
ಕೈಗಾರಿಕೆಗಳ ಸಿ.ಎಸ್.ಆರ್ ನಿಧಿಯಿಂದ ಶಾಲಾ ಕಟ್ಟಡಗಳ ದುರಸ್ಥಿ ಮಾಡಿಸಲು ಶಾಲೆಗಳ ಪಟ್ಟಿ ನೀಡಬೇಕು. ದುರಸ್ಥಿ ಕಾರ್ಯಕ್ಕೆ ಸಹಕರಿಸುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಿದ ಕೈಗಾರಿಕೆಗಳಿಗೆ ಆ.15 ಅಥವಾ ಜ.26ರಂದು ಸನ್ಮಾನ ಮಾಡಲಾಗುವುದು ಎಂದು ತಿಳಿಸಿದರು.
ಶಾಲಾ ಮತ್ತು ಅಂಗನವಾಡಿ ಕೇಂದ್ರದ ಮಕ್ಕಳ ಆರೋಗ್ಯ ತಪಾಸಣೆಯನ್ನು ನಿಗದಿತ ಸಮಯಕ್ಕೆ ನಡೆಸಲು ನಿಗಾವಹಿಬೇಕು.ತಾಯಿ ಮತ್ತು ಶಿಶು ಮರಣ ಪ್ರಮಾಣ ತಡೆಯುವ ನಿಟ್ಟಿನಲ್ಲಿ ವೈದ್ಯರು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ತಿಳಿಸಿದರು.
ಹಾಸನಾಂಬ ಜಾತ್ರಾ ಮಹೋತ್ಸವವು ಅಕ್ಟೋಬರ್ ತಿಂಗಳಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಭಕ್ತಾಥಿಗಳು ದೇವರ ದರ್ಶನದ ನಂತರ ಚನ್ನಪಟ್ಟಣ ಕೆರೆ ಅಂಗಳದಲ್ಲಿ ನಿರ್ಮಾಣವಾಗಿರುವ ವಿಹಾರ ಧಾಮದಲ್ಲಿ ಬೋಟ್ ಮೂಲಕ ವಿಹಾರ ಮಾಡಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ನೀರು ತುಂಬಿಸಲು ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ಆಗಸ್ಟ್ ಮೊದಲ ವಾರದಲ್ಲಿ ಬೋಟ್ ವಿಹಾರಕ್ಕೆ ಚಾಲನೆ ನೀಡಬೇಕು ಎಂದು ನಿರ್ದೇಶನ ನೀಡಿದರು.
ಹಾಸನಾಂಬ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಭಕ್ತಾಧಿಗಳು ದೇವರ ದರ್ಶನದ ನಂತರ ಜಿಲ್ಲೆಯಲ್ಲಿರುವ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಲು ಅನುಕೂಲವಾಗುವಂತೆ ಬಸ್‌ಗಳ ವ್ಯವಸ್ಥೆಗೆ ಕ್ರಮವಹಿಸಲು ಕೆ.ಎಸ್.ಆರ್.ಟಿ.ಸಿ ವಿಭಾಗಾಧಿಕಾರಿಗಳಿಗೆ ತಿಳಿಸಿದರು.
ನಗರದ ಸೌಂದರ್ಯಕ್ಕೆ ಒತ್ತು ನೀಡಬೇಕು ಈ ನಿಟ್ಟಿನಲ್ಲಿ ಮುಖ್ಯ ರಸ್ತೆಯಾದ ಬೂವನಹಳ್ಳಿಯಿಂದ ತಣ್ಣೀರುಹಳ್ಳದವರೆಗೆ ರಸ್ತೆ ಎರಡು ಬದಿಯಲ್ಲಿ ಹಾಗೂ ರಸ್ತೆ ಮದ್ಯಭಾಗದಲ್ಲಿ ತೋಟಗಾರಿಕೆ ಇಲಾಖೆಯವರು ಸೌಂದರ್ಯಿಕರಣಕ್ಕಾಗಿ ಹೂ ಗಿಡಗಳನ್ನು ನೆಟ್ಟು ಪೋಷಣೆಗೆ ಕ್ರಮವಹಿಸಿ ಎಂದು ತಿಳಿಸಿದರು.
ರಸ್ತೆ ಬದಿಯಲ್ಲಿ ಒತ್ತುವರಿಯಾಗಿರುವುದನ್ನು ತೆರವುಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸಬೇಕು.ಬಳಕೆಯಾಗಿರುವ ಪ್ಲಾಸ್ಟಿಕ್ ಖಾಲಿ ಬಾಟಲ್ ಹಾಗೂ ಇತರೆ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಕ್ಕೆ ಕ್ರಮವಹಿಸಲು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ಸೂಚನೆ ನೀಡಿದರು.
ರಸ್ತೆ ಎರಡು ಬದಿಯಲ್ಲಿ ಚರಂಡಿಗಳ ಸ್ಲಾಬ್ ಹಾಳಾಗಿ ಕೆಲವು ಕಡೆ ಓಪನ್ ಆಗಿದೆ ಇವುಗಳ ಸರಿಪಡಿಸಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ ನಗರ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಮಳೆ ಗಾಳಿಗೆ ಬಿದ್ದಿರುವ ವಿದ್ಯುತ್ ತಂತಿಗಳು ಹಾಗೂ ಕಂಬಗಳನ್ನು ಸರಿಪಡಿಸಲು ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಚೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ಅರಣ್ಯ ಇಲಾಖೆವತಿಯಿಂದ ರಸ್ತೆ ಬದಿಯಲ್ಲಿ ಗಿಡ ನೆಡುವ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಗಮನಕ್ಕೆ ತಂದು ನಂತರ ನೆಡುವಂತೆ ತಿಳಿಸಿದರು.ಸರ್ಕಾರದಿಂದ ಬಿಡುಗಡೆಯಾಗಿರುವ ಮೊದಲ ಕಂತಿನ ಹಣವನ್ನು ನಿಗದಿತ ಅವಧಿಯಲ್ಲಿ ವೆಚ್ಚ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಮಾಜ ಕಲ್ಯಾಣ ಇಲಾಖೆಯ ಬಿ.ಸಿ.ಎಂ ಹಾಸ್ಟೆಲ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಅಗತ್ಯವಿರುವ ಜಾಗವನ್ನು ಶೀಘ್ರವಾಗಿ ಗುರುತಿಸಿ. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಕುಡಿಯುವ ನೀರಿನ ಮಾದರಿಗಳನ್ನು ಪರೀಕ್ಷೆ ಮಾಡಿಸಲು ಕ್ರಮವಹಿಸಿ ಎಂದರು.
ಜಾನುವಾರುಗಳಿಗೆ ಯಾವುದೇ ಕಾಯಿಲೆಗಳು ಬಾದಿಸದಂತೆ ಮುಂಜಾಗ್ರತೆವಹಿಸಿ ಲಸಿಕಾ ಕಾರ್ಯಕ್ರಮಕ್ಕೆ ಒತ್ತು ನೀಡುವಂತೆ ತಿಳಿಸಿದರು.
ಬಿ.ಸಿ.ಎಂ ಇಲಾಖೆಗೆ ಸಂಬಂಧಿಸಿದಂತೆ ಬಜೆಟ್‌ನಲ್ಲಿ ಜಿಲ್ಲೆಗೆ 2 ಬಾಲಕರ ಹಾಗೂ 2 ಬಾಲಕಿಯರ ಹಾಸ್ಟೆಲ್ ಗಳು ಮಂಜೂರಾಗಿದ್ದು, ಕಟ್ಟಡ ನಿರ್ಮಾಣಕ್ಕೆ ಜಾಗ ಗುರುತಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್.ಪೂರ್ಣಿಮಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ ಕುಮಾರ್, ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ . ಉಪ ವಿಭಾಗಾಧಿಕಾರಿಗಳಾದ ಮಾರುತಿ, ಶೃತಿ ಉಪಸ್ಥಿತರಿದ್ದರು. ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.