

ಚಾಮರಾಜನಗರ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಬುಧವಾರ ನಾಡಿನ ಶ್ರೇಷ್ಠ ಸಾಹಿತಿ ಡಾ.ಎಸ್.ಎಲ್.ಭೈರಪ್ಪನವರ ಶ್ರದ್ಧಾಂಜಲಿ ಸಭೆಯನ್ನು ನಡೆಸಲಾಯಿತು.
ಸಭೆಯಲ್ಲಿ ಸಾಹಿತಿ ಹೊಂಗನೂರು ಸಿದ್ದಲಿಂಗಸ್ವಾಮಿ ಮಾತನಾಡಿ, ಬೈರಪ್ಪನವರು ನೇರ ದಿಟ್ಟ ಸಾಹಿತಿ. ಸತ್ಯವನ್ನು ತಿಳಿಸಿದ ಮಹಾನ್ ವ್ಯಕ್ತಿ. ಪ್ರತಿಯೊಂದನ್ನು ಸಂಶೋಧನೆಯ ಮೂಲಕ ಸಾಹಿತ್ಯ ರಚಿಸಿದ ಜಗತ್ತಿನ ಕೆಲವೇ ವ್ಯಕ್ತಿಗಳಲ್ಲಿ ಬೈರಪ್ಪನವರು ಒಬ್ಬರು ಎಂದು ತಿಳಿಸಿದರು. ಬರಹಗಾರ ಎಸ್.ಲಕ್ಷ್ಮಿನರಸಿಂಹ ಮಾತನಾಡಿ, ಭೈರಪ್ಪನವರ ಕಾದಂಬರಿಗಳು ನಾಡಿನ ಜೀವಂತಿಕೆಯ ಸಾಹಿತ್ಯವಾಗಿದೆ. ಸತ್ವಯುತ ಸಾಹಿತ್ಯಕ್ಕೆ ಎಂದು ಸಾವಿಲ್ಲ ಎನ್ನುವುದಕ್ಕೆ ಭೈರಪ್ಪನವರ ಬರವಣಿಗೆಗಳು, ಅವರ ಪುಸ್ತಕ ಮಾರಾಟಗಳೇ ಸಾಕ್ಷಿಯಾಗಿವೆ ಎಂದು ತಿಳಿಸಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ್ ಋಗ್ವೇದಿ ಮಾತನಾಡಿ, ವಿಶ್ವದ ಶ್ರೇಷ್ಠ ಸಾಹಿತಿಗಳಾದ ಭೈರಪ್ಪನವರು ಕನ್ನಡ ನಾಡಿನ ಹೆಮ್ಮೆಯ ಕವಿ. ಭಾರತೀಯ ತತ್ವಶಾಸ್ತ್ರ, ಸಂಸ್ಕೃತಿ, ಪರಂಪರೆ, ಜೀವನ ವಿಧಾನ, ಇತಿಹಾಸ, ಧರ್ಮ, ಆಧ್ಯಾತ್ಮ, ಮೌಲ್ಯಗಳ ಸಮಗ್ರ ಮಾಹಿತಿ ಇದ್ದ ಭೈರಪ್ಪನವರು ತಮ್ಮ ಇಡೀ ಜೀವಿತಾವಧಿಯಲ್ಲಿ ಅಪಾರ ಸಾಹಿತ್ಯವನ್ನು ರಚಿಸಿ ಕೋಟ್ಯಾಂತರ ಜನರಿಗೆ ಸ್ಫೂರ್ತಿ ತುಂಬಿದ ಮಹಾನ್ ವ್ಯಕ್ತಿ . ಅವರ ಸಾಹಿತ್ಯದಿಂದಲೇ ಜೀವನವನ್ನು ಅರ್ಥ ಮಾಡಿಕೊಂಡ ಕೋಟ್ಯಾಂತರ ಜನರು ಅಭಿಮಾನಿಗಳಾಗಿದ್ದಾರೆ ಎಂದು ತಿಳಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಬಿ.ಕೆ.ಆರಾಧ್ಯ, ರಾಜಗೋಪಾಲ್, ರವಿಚಂದ್ರ ಪ್ರಸಾದ್, ಶಿವಲಿಂಗಮೂರ್ತಿ, ಸರಸ್ವತಿ, ನಾಗೇಶ್ ಉಪಸ್ಥಿತರಿದ್ದರು.