

ಬೆಳಗಾವಿ: ವಿಭಜನೆ(ವಾಂಟ್ನಿ) ಪತ್ರ ನೋಂದಣಿ ಮಾಡಿಕೊಡಲು ಲಂಚ ಕೇಳಿದ ಸವದತ್ತಿ ತಾಲೂಕಿನ ಮುರಗೋಡ ಸಬ್ ರಜಿಸ್ಟ್ರಾರ್ ಸಂತೋಷ ಕಪಲಿ, ಬಾಂಡ್ ರೈಟರ್ ಶಿವಯೋಗಿ ಶಂಕರಯ್ಯ ಮಲ್ಲಯ್ಯನವರ ಬುಧವಾರ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಬಲೆಗೆ ಬಿದ್ದಿದ್ದಾರೆ. ವಾಟ್ನಿ ಪತ್ರ ನೋಂದಣಿ ಮಾಡಿಕೊಡಲು ಸಬ್ ರಜಿಸ್ಟ್ರಾರ್ ಸಂತೋಷ ಕಪಲಿ ಅವರು ಬಾಂಡ್ ರೈಟರ್ ಶಿವಯೋಗಿ ಶಂಕರಯ್ಯ ಮಲ್ಲಯ್ಯನವರ ಮೂಲಕ ನೋಂದಣಿ ಶುಲ್ಕ, ಇರ ವೆಚ್ಚ ಎಂದು ಹೇಳಿ 10 ಸಾವಿರ ರೂ. ನೀಡುವಂತೆ ಬೇಡಿಕೆಯಿಟ್ಟಿದ್ದರು. ಅದರಲ್ಲಿ ಮುಂಗಡವಾಗಿ 6 ಸಾವಿರ ರೂ. ಪೋನ್ ಪೇ ಮೂಲಕ ಪಾವತಿಸಿದ್ದರು. ಈ ಪೈಕಿ 2,870 ರೂ. ನಗದಿಗೆ ರಶೀದಿ ನೀಡಿದ್ದರು. ಬಳಿಕ ವಾಂಟ್ನಿ ಪತ್ರ ಕೇಳಿದಾಗ ಬಾಕಿ ಹಣ ನೀಡಿ, ತೆಗೆದುಕೊಂಡು ಹೋಗುವಂತೆ ಸೂಚಿಸಿದ್ದರು. ಅಲ್ಲದೆ, ವಾಂಟ್ನಿ ಪತ್ರ ಕೊಡಲು ನಿತ್ಯ ಅಲೆದಾಡಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಸವದತ್ತಿ ತಾಲೂಕಿನ ಕೊಡ್ಲಿವಾಡ ಗ್ರಾಮದ ಶಿವಪ್ಪ ವರಗಣ್ಣವರ ಎಂಬುವರು ಎಸಿಬಿಗೆ ದೂರು ನೀಡಿದ್ದರು. ದೂರಿನ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ಡಿವೈಎಸ್‌ಪಿ ಜಿ.ಎಂ.ಕರುಣಾಕರಶೆಟ್ಟಿ, ಪೊಲೀಸ್ ನಿರೀಕ್ಷಕ ಎ.ಎಸ್. ಗುದಿಗೊಪ್ಪ ನೇತೃತ್ವದ ತಂಡ ದಾಳಿ ನಡೆಸಿದೆ ಎಂದು ಎಸಿಬಿ ಎಸ್‌ಪಿ ಬಿ.ಎಸ್.ನೇಮಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.