ಎಸಿಬಿ ಬಲೆಗೆ ಬಿದ್ದ ಗ್ರಾಮಲೆಕ್ಕಾಧಿಕಾರಿ

05 rtl 01 vishwanath
Published on

ರಟ್ಟಿಹಳ್ಳಿ: ಸ್ಥಳೀಯ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಮಂಗಳವಾರ ಲಂಚ ಸ್ವೀಕರಿಸುತ್ತಿದ್ದ ಗ್ರಾಮಲೆಕ್ಕಾಧಿಕಾರಿ ವಿಶ್ವನಾಥ ಉಪ್ಪಲದಡ್ಡಿ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಸ್ಥಳೀಯ ನಿವಾಸಿ ವೀರೇಶ ಬೆಣ್ಣಿ ಎಂಬುವರಿಂದ ಜಮೀನಿನ ಪೋಡಿ ಮಾಡುವ ಸಂಬಂಧ ಗ್ರಾಮಲೆಕ್ಕಾಧಿಕಾರಿ ವಿಶ್ವನಾಥ ಉಪ್ಪಲದಡ್ಡಿ 20 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಕುರಿತು ವೀರೇಶ ಬೆಣ್ಣಿ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು.

ಅದರಂತೆ ಮಂಗಳವಾರ ಕಚೇರಿಯಲ್ಲಿ ವೀರೇಶ ಬೆಣ್ಣಿ ಅವರಿಂದ 4 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ದಾಳಿ ನಡೆಸಿದ ಡಿವೈಎಸ್​ಪಿ ಮಹಾಂತೇಶ್ವರ ಜಿದ್ದಿ, ಸಿಪಿಐ ಸುದರ್ಶನ ಪಟ್ಟಣಕುಡೆ ಅವರ ಕೈಗೆ ಲಂಚದ ಹಣದ ಸಮೇತ ಗ್ರಾಮಲೆಕ್ಕಾಧಿಕಾರಿ ವಿಶ್ವನಾಥ ಸಿಕ್ಕಿ ಬಿದ್ದಿದ್ದಾರೆ. ಎಸ್ಪಿ ಜಯಪ್ರಕಾಶ ಮಾರ್ಗದರ್ಶನದಲ್ಲಿ ದಾಳಿ ನಡೆಸಲಾಗಿದೆ. ಪ್ರಕರಣ ದಾಖಲಿಸಿಕೊಂಡು ಗ್ರಾಮಲೆಕ್ಕಾಧಿಕಾರಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಎಸಿಬಿ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ನಮ್ಮ ತಂದೆ ತೀರಿಕೊಂಡಿದ್ದರಿಂದ ಜಮೀನಿನ ಪೋಡಿ ಮಾಡಿಸಲು ಗ್ರಾಮಲೆಕ್ಕಾಧಿಕಾರಿ ವಿಶ್ವನಾಥ ಬಳಿ ಸುಮಾರು 1 ವರ್ಷದಿಂದ ಅಲೆದಾಡಿ ಬೇಸತ್ತು ಹೋಗಿದ್ದೆ. ಈ ಅಧಿಕಾರಿ ಜಮೀನಿನ ಪೋಡಿ ಮಾಡಿಸಲು ಈ ಮೊದಲು 20 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈಗಾಗಲೇ ಅವರಿಗೆ 15 ಸಾವಿರ ರೂ. ನೀಡಿದ್ದೆ. ಮಂಗಳವಾರ ಉಳಿದ 4 ಸಾವಿರ ರೂ. ನೀಡುವಾಗ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ ಎಂದು ದೂರುದಾರ ವೀರೇಶ ಬೆಣ್ಣಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net