

ಮುಂಡರಗಿ: ಪಪ್ಪಾಯಿ, ನುಗ್ಗೆ ಬೆಳೆಗೆ ಸಹಾಯಧನ ಮಂಜೂರು ಮಾಡಲು 14 ಸಾವಿರ ರೂ. ಲಂಚ ಪಡೆಯುತ್ತಿದ್ದ ಪ್ರಭಾರಿ ಸಹಾಯಕ ತೋಟಗಾರಿಕೆ ಅಧಿಕಾರಿ ಸುರೇಶ ಹನುಮಂತಪ್ಪ ಬಾರಕೇರ ಅವರು ಮಂಗಳವಾರ ಎಸಿಬಿ ಡಿಎಸ್ಪಿ ವಾಸುದೇವರಾಮ್ ನೇತೃತ್ವದ ತಂಡದ ಬಲೆಗೆ ಬಿದ್ದಿದ್ದಾರೆ.
ಎಸಿಬಿ ಠಾಣೆಗೆ ದೂರ ಸಲ್ಲಿಸಿದ್ದ ಜಂತ್ಲಿಶಿರೂರ ಗ್ರಾಮದ ಮೈಲಾರಪ್ಪ ಬಸಪ್ಪ ಪರಿಮಳದ ಅವರು ತಮ್ಮ ಜಮೀನು ಮತ್ತು ತಮ್ಮ ಸಹೋದರ ವೆಂಕಟೇಶ ಅವರ ಜಮೀನು ಸೇರಿ ಒಟ್ಟು 2 ಹೆಕ್ಟೇರ್ ಜಮೀನಿನಲ್ಲಿ ಪ್ರೋತ್ಸಾಹ ಧನದ ಯೋಜನೆಯಡಿ ಪಪ್ಪಾಯಿ, ನುಗ್ಗೆ ಬೆಳೆಯಲು 2019 ಮೇ 22ರಂದು ತೋಟಗಾರಿಕೆ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಜಮೀನಿನಲ್ಲಿ ಮನೆಯವರು ಹಾಗೂ ಇತರ ಕೂಲಿಕಾರರ ನೆರವಿನಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಗುಂಡಿ ತೋಡುವುದು, ಗೊಬ್ಬರ ಹಾಕುವುದು, ಸ್ವಚ್ಛ ಮಾಡುವುದು ಮೊದಲಾದ ಕೃಷಿ ಚಟುವಟಿಕೆ ಮಾಡಿದ್ದರು. ಈಗಾಗಲೇ ಪಪ್ಪಾಯಿ, ನುಗ್ಗೆ ಫಸಲು ಸಹ ಬಂದಿದೆ. ತೋಟಗಾರಿಕೆ ಬೆಳೆ ಬೆಳೆಯಲು ಪ್ರತಿ ಹೆಕ್ಟೇರ್ಗೆ 1.89 ಲಕ್ಷ ರೂ. ಪ್ರೋತ್ಸಾಹ ಧನ ಪಡೆಯಲು ಅವಕಾಶವಿದೆ. ತೋಟಗಾರಿಕೆ ಅಧಿಕಾರಿಗಳು ನಾಲ್ಕೈದು ಬಾರಿ ಜಮೀನಿಗೆ ಭೇಟಿ ನೀಡಿ ಬೆಳೆ ಪರಿಶೀಲನೆ ನಡೆಸಿದ್ದಾರೆ.
ಚಾಕುವಿನಿಂದ ಇರಿದು ಯುವಕನ ಕೊಲೆ
ಮುಂಡರಗಿ: ತನ್ನ ಸಹೋದರಿಯೊಂದಿಗೆ ಸಲುಗೆಯಿಂದ ಇರಬೇಡಿ ಎಂದು ಬುದ್ಧಿವಾದ ಹೇಳಿದ ಯುವಕನನ್ನು ಸಹೋದರರಿಬ್ಬರು ಚಾಕುವಿನಿಂದ ಇರಿದು ಕೊಲೆಗೈದ ಘಟನೆ ಸೋಮವಾರ ರಾತ್ರಿ ಕಲಕೇರಿ ಗ್ರಾಮದಲ್ಲಿ ನಡೆದಿದೆ. ಮುಸ್ತಾಕ್ ಅಲಿ ಮಾಬುಸಾಬ್ ನದಾಫ್ (23) ಕೊಲೆಯಾದ ಯುವಕ. ಮುಸ್ತಾಕ್ ಸಹೋದರಿ ಯೊಂದಿಗೆ ಅದೇ ಊರಿನ ದಾವಲಸಾಬ್ ಅಲ್ಲಾಸಾಬ್ ಮಲ್ಲಾಡದ ಸಲುಗೆಯಿಂದ ವರ್ತಿಸುತ್ತಿದ್ದನು ಎಂದು ಹೇಳಲಾಗುತ್ತಿದೆ. ಹೀಗಾಗಿ ತನ್ನ ಸಹೋದರಿಯೊಂದಿಗೆ ಸಲುಗೆಯಿಂದ ಇರಬೇಡ ಎಂದು ಮುಸ್ತಾಕ್, ದಾವಲಸಾಬ್ಗೆ ಬುದ್ಧಿವಾದ ಹೇಳಿದ್ದ. ಅಲ್ಲದೆ, ಊರಲ್ಲಿ ಹಿರಿಯರು ಸೇರಿ ಈ ಬಗ್ಗೆ ಪಂಚಾಯಿತಿ ಕೂಡ ಮಾಡಿದ್ದರು. ಇದೆಲ್ಲದರಿಂದ ಆಕ್ರೋಶಗೊಂಡ ದಾವಲ್ಸಾಬ್ ತನ್ನ ಸಂಬಂಧಿಗಳಾದ ಮಹ್ಮದ್ಅಲಿ ಅಲ್ಲಾಸಾಬ್ ಮಲ್ಲಾಡದ, ಸೈನಾಜ್ ಅಲ್ಲಾಸಾಬ್ ಮಲ್ಲಾಡದ, ಅಲ್ಲಾಸಾಬ್ ಧರಿಯಾಸಾಬ್ ಮಲ್ಲಾಡದ ಅವರೊಂದಿಗೆ ಸೇರಿ ಮುಸ್ತಾಕ್ ಅಲಿ ಜತೆ ಜಗಳ ಮಾಡಿದ್ದಾನೆ. ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ಹೋದಾಗ ಆರೋಪಿಗಳು ಮುಸ್ತಾಕ್ಗೆ ಚಾಕುವಿನಿಂದ ಇರಿದಿದ್ದಾರೆ. ಗಾಯಗೊಂಡಿದ್ದ ಮುಸ್ತಾಕ್ನನ್ನು ಗದಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ಮೃತಪಟ್ಟಿದ್ದಾನೆ. ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ದಾವಲ್ಸಾಬ್ ಮತ್ತು ಮಹ್ಮದ್ಅಲಿ ಅವರನ್ನು ವಶಕ್ಕೆ ಪಡೆದಿದ್ದಾರೆ.
ಕಾರಿನ ಆಸೆಗೆ 2.39 ಲಕ್ಷ ಕಳೆದುಕೊಂಡ ಶಿಕ್ಷಕಿ!
ನರೇಗಲ್ಲ: ನಿಮ್ಮ ಮೊಬೈಲ್ ಸಂಖ್ಯೆಯು ಲಕ್ಕಿ ಡ್ರಾನಲ್ಲಿ ಆಯ್ಕೆಯಾಗಿದ್ದು, ನಿಮಗೆ ಕಾರು ಅಥವಾ ಅದರ ಮೊತ್ತದ ಹಣವನ್ನು ನೀಡಲಾಗುತ್ತದೆ ಎಂದು ಪುಸಲಾಯಿಸಿದ ಸೈಬರ್ ವಂಚಕರು, ಶಿಕ್ಷಕಿಗೆ 2.39500 ರೂ. ಪಂಗನಾಮ ಹಾಕಿದ ಘಟನೆ ನರೇಗಲ್ಲನಲ್ಲಿ ಜರುಗಿದೆ.
ಪಟ್ಟಣದ ಹಿರೇಮಠದ ಹತ್ತಿರದ ನಿವಾಸಿ, ಸ್ಥಳೀಯ ಭಾಗ್ಯ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಪ್ರಭಾವತಿ ವೀರಪ್ಪ ಜುಟ್ಲದ ವಂಚನೆಗೊಳಗಾದವರು. ಆ. 31ರಂದು ಶಿಕ್ಷಕಿಗೆ 94331 64780, 90889 70277 ನಂಬರ್ಗಳಿಂದ ಕರೆ ಮಾಡಿರುವ ವ್ಯಕ್ತಿಗಳು, ‘ನಾವು ಸ್ನಾಪ್ಡೀಲ್ ಕಂಪನಿಯಿಂದ ಮಾತನಾಡುತ್ತಿದ್ದೇವೆ. ನಿಮ್ಮ ಮೊಬೈಲ್ ಸಂಖ್ಯೆಯು ಲಕ್ಕಿ ಡ್ರಾನಲ್ಲಿ ಆಯ್ಕೆಯಾಗಿದೆ. ಅದರ ಪ್ರಕಾರ ತಮಗೆ ಬಹುಮಾನವಾಗಿ ಒಂದು ಕಾರು ಅಥವಾ ಅದರ ಮೌಲ್ಯದ ಮೊತ್ತವನ್ನು ನೀಡುತ್ತೇವೆ. ಅದಕ್ಕಾಗಿ, ತಾವು ಮೊದಲು ನಮ್ಮ ಕಂಪನಿಯ ಸದಸ್ಯತ್ವ ಪಡೆದು, ಕಾರಿನ ತೆರಿಗೆ, ಮೆಂಬರ್ಶಿಪ್ ಫೀ ತುಂಬಬೇಕು. ಅದನ್ನು ಮತ್ತೆ ಮರಳಿಸಲಾಗುತ್ತದೆ ಎಂದು ಹೇಳಿದ್ದಾರೆ. ಸತತ ಎರಡು ದಿನಗಳ ಕಾಲ ವಂಚಕರು ಕರೆ ಮಾಡಿ, ಶಿಕ್ಷಕಿಯ ಎಸ್ಬಿಐ ಖಾತೆಯಿಂದ 2,35,000 ರೂ. ಹಾಗೂ ಅವರ ಮಗಳ ಸೆಂಟ್ರಲ್ ಬ್ಯಾಂಕ್ ಖಾತೆಯಿಂದ 4500 ರೂ.ಗಳನ್ನು ಲಪಟಾಯಿಸಿದ್ದಾರೆ. ಹಣ ವರ್ಗಾವಣೆಯಾದ ಮರುದಿನದಿಂದ ವಂಚಕರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದು, ಮೋಸ ಹೋಗಿರುವುದು ಗೊತ್ತಾಗಿದೆ. ಕಾರಿನ ವ್ಯಾಮೋಹಕ್ಕೆ ಬಿದ್ದು ಸುಲಭದಲ್ಲಿ ಕಾರು ಹೊಂದುವ ಆಸೆಯಿಂದ ಶಿಕ್ಷಕಿ ಮತ್ತು ಮಗಳು ಮೋಸ ಹೋಗಿದ್ದಾರೆ. ಶಿಕ್ಷಕಿ ಮತ್ತು ಮಗಳು ಗದಗ ಸೈಬರ್ ಕ್ರೖೆಂ ಠಾಣೆಯಲ್ಲಿ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.