ಎಸಿಬಿ ಬಲೆಗೆ ಕಂದಾಯ ನಿರೀಕ್ಷಕರ ಮಧ್ಯವರ್ತಿ

H4 Shivananda Shirahatti New
Published on

ಕುಂದಗೋಳ: ಮಹಿಳೆಯಿಂದ 500 ರೂ. ಲಂಚ ಪಡೆಯಲು ಮುಂದಾಗಿದ್ದ ಕುಂದಗೋಳ ಕಂದಾಯ ನಿರೀಕ್ಷಕರ ಮಧ್ಯವರ್ತಿಯೊಬ್ಬ ಗುರುವಾರ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಲೆಗೆ ಬಿದ್ದಿದ್ದಾನೆ.

ಕಂದಾಯ ನಿರೀಕ್ಷಕ ಸದಾನಂದ ದೇಮಣ್ಣವರ ಹಾಗೂ ಮಧ್ಯವರ್ತಿ ಶಿವಾನಂದ ಶಿರಹಟ್ಟಿ ವಿರುದ್ಧ ಪ್ರಕರಣ ದಾಖಲಾಗಿದೆ.

ಬೆಟದೂರು ಗ್ರಾಮದ ಯಲ್ಲಪ್ಪ ಶಿವಳ್ಳಿ ಎಂಬುವರು ತಮ್ಮ ಚಿಕ್ಕಮ್ಮ ಮಾದೇವಿ ಹಂಚಿನಾಳ ಹೆಸರಲ್ಲಿ ಮನಸ್ವಿನಿ ಯೋಜನೆಯಡಿ ಮಾಸಾಶನಕ್ಕೆ ಅರ್ಜಿ ಸಲ್ಲಿಸಿದ್ದರು. ಆ ಕುರಿತು ವಿಚಾರಣೆಗೆಂದು ಜ.30ರಂದು ಕಂದಾಯ ನಿರೀಕ್ಷಕ ಸದಾನಂದ ಬಳಿ ತೆರಳಿದ್ದರು. ಅವರು ತಮ್ಮ ಮಧ್ಯವರ್ತಿ ಶಿವಾನಂದನನ್ನು ಭೇಟಿಯಾಗುವಂತೆ ತಿಳಿಸಿದ್ದರು. ಆತ ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಈ ಕುರಿತು ಯಲ್ಲಪ್ಪ ಶಿವಳ್ಳಿ ಧಾರವಾಡ ಎಸಿಬಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಎಸಿಬಿ ಡಿಎಸ್​ಪಿ ಎಲ್. ವೇಣುಗೋಪಾಲ ಮಾರ್ಗದರ್ಶನದಲ್ಲಿ ಇನ್​ಸ್ಪೆಕ್ಟರ್ ಬಿ.ಎ. ಜಾಧವ ಹಾಗೂ ಮಂಜುನಾಥ ಹಿರೇಮಠ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ. ಲಂಚ ಪಡೆಯುತ್ತಿದ್ದ ಶಿವಾನಂದನನ್ನು ಬಂಧಿಸಿದೆ. ತನಿಖೆ ಮುಂದುವರಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net