

ಜಡಿಗೇನಹಳ್ಳಿ: ಹೊಸಕೋಟೆ ತಾಲೂಕು ಶಾಂತನಾಪುರದಲ್ಲಿ ದಲಿತರಿಗೆ ಸೇರಿದ ಜಮೀನನ್ನು ಕಬಳಿಸಿರುವ ಪ್ರಕರಣವನ್ನು ಕೂಡಲೇ ಎಸಿಬಿ ತನಿಖೆಗೆ ವಹಿಸಬೇಕು, ಬಡವರ ಜಮೀನು ಬಡವರಿಗೆ ವಾಪಸ್ ಬರಬೇಕು ಅಲ್ಲಿಯವರೆಗೆ ವಿರಮಿಸುವುದಿಲ್ಲ ಎಂದು ಸಚಿವ ಎಂಟಿಬಿ ನಾಗರಾಜ್ ಪುನರುಚ್ಚರಿಸಿದರು.
ಹೋಬಳಿ ಕಣೇಕಲ್ ಕ್ರಾಸ್‌ನಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಶಾಂತನಪುರದಲ್ಲಿ ಭೂ ಅಕ್ರಮವನ್ನು ಎಸಿಬಿ ತನಿಖೆಗೊಪ್ಪಿಸುವ ಬಗ್ಗೆ ಕಂದಾಯ ಸಚಿವರು ಭರವಸೆ ನೀಡಿದ್ದಾರೆ. ನಾನೂ ಸಹ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ಒತ್ತಡ ಹಾಕುತ್ತಿದ್ದೇನೆ. ಎಸಿಬಿ ತನಿಖೆ ಬಳಿಕ ಸತ್ಯಾಸತ್ಯತೆ ಬಯಲಿಗೆ ಬರಲಿದೆ ದಲಿತರಿಗೆ ನ್ಯಾಯಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸುಮಾರು 50 ದಲಿತ ಕುಟುಂಬ ಜಮೀನು ಕಳೆದುಕೊಂಡು ಬೀದಿಗೆ ಬಂದಿವೆ. ಬಡವರ ಜಮೀನು ಕಬಳಿಸಿ ರಾಜಕಾರಣ ಮಾಡುವವರಿಗೆ ಮುಂದಿನ ದಿನಗಳಲ್ಲಿ ಮತದಾರರರ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ವಿಶೇಷ ಅನುದಾನದ: ರಾಜಕಾರಣ ಚುನಾವಣೆಗಷ್ಟೇ ಸೀಮಿತವಾಗಿರಬೇಕು ಎಂದು ಹೇಳುತ್ತಲೆ ಇರುತ್ತೇನೆ. ಆದರೆ ಕೆಲವರು ಎಲ್ಲದರಲ್ಲೂ ರಾಜಕಾರಣ ಮಾಡುತ್ತಾರೆ, ಸ್ಥಳೀಯ ಶಾಸಕರು ಹಾಗೂ ಸಂಸದರು ಅವರ ಅನುದಾನ ತಂದು ಅಭಿವೃದ್ಧಿ ಮಾಡಲಿ ಅದಕ್ಕೆ ನಾನು ಅಡ್ಡಿಬರಲ್ಲ, ಆದರೆ 2019-20ರಲ್ಲಿ ಸಿಎಂ ಬಿಎಸ್‌ವೈ ಹೊಸಕೋಟೆ ಕ್ಷೇತ್ರಕ್ಕೆ 35 ಕೋಟಿ ರೂ.ವಿಶೇಷ ಅನುದಾನ ಬಿಡುಗಡೆ ಮಾಡಿದ್ದಾರೆ, ಆ ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುತ್ತಿದ್ದೇನೆ, ನಾನು ತಂದ ಅನುದಾನದ ಕಾಮಗಾರಿಗೆ ಅವರು ಪೂಜೆ ಮಾಡಲು ಹೊರಡುತ್ತಾರೆ ಎಂದು ಪರೋಕ್ಷವಾಗಿ ಶಾಸಕ ಶರತ್‌ಬಚ್ಚೇಗೌಡರ ವಿರುದ್ಧ ಎಂಟಿಬಿ ಆಕ್ರೋಶ ವ್ಯಕ್ತಪಡಿಸಿದರು.
ಅವರು ಚಾಲನೆ ನೀಡಿದ ಎಷ್ಟೊ ಕಾಮಗಾರಿಗಳಿಗೆ 3 ತಿಂಗಳು ಕಳೆದರೂ ಚಾಲನೆ ಸಿಕ್ಕಿಲ್ಲ, ಸುಮ್ಮನೆ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುವ ಬದಲು ಪ್ರಾಮಾಣಿಕವಾಗಿ ಅಭಿವೃದ್ಧಿ ಕೆಲಸ ಮಾಡಬೇಕು ಎಂದರು.
ಒಂದೇ ದಿನ ವಿವಿಧೆಡೆ ಚಾಲನೆ: ಗುರುವಾರ ಹೊಸಕೋಟೆ ತಾಲೂಕಿನ ವಿವಿಧೆಡೆ ವಿಶೇಷ ಅನುದಾನದಡಿ 2.40 ಕೋಟಿ ರೂ.ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಎಂಟಿಬಿ ಚಾಲನೆ ನೀಡಿದರು. ವಣಚನಹಳ್ಳಿಯಿಂದ ಪರಮನಹಳ್ಳಿ ಸೇರುವ ರಸ್ತೆ ಅಭಿವೃದ್ಧಿ ಕಾಮಗಾರಿ, ದೊಡ್ಡದಾಸರಹಳ್ಳಿ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ, ಕೊರಳೂರಿನಿಂದ ಅಪ್ಪಾಜಿಪುರ ನಡುವತ್ತಿ ಮಾರ್ಗವಾಗಿ ಕಾಚಾರಕನಹಳ್ಳಿ ಸೇರುವ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಗುರುವಾರ ಚಾಲನೆ ನೀಡಲಾಯಿತು.