ಎಸಿ ನೇತೃತ್ವದಲ್ಲಿ ಅಹವಾಲು ಸ್ವೀಕಾರ

31kglphoto.1
Published on

ಕೊಳ್ಳೇಗಾಲ: ಸಾಮಾಜಿಕ ಬಹಿಷ್ಕಾರ ಹಾಕಿ 50 ಸಾವಿರ ರೂ. ದಂಡ ಹಾಕಿದ್ದಾರೆ… ಪಟ್ಟಣ ವ್ಯಾಪ್ತಿಯಲ್ಲಿ ಬಹುತೇಕ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ನಿಂತಿವೆ… ಅಕ್ರಮವಾಗಿ ಮದ್ಯ ಮಾರಾಟ ಹಾಗೂ ಮರಳು ಸಾಗಣೆ ನಡೆಯುತ್ತಿದೆ…! ಇವು ಪಟ್ಟಣದ ತಾಲೂಕು ಕಚೇರಿಯಲ್ಲಿ ಮಂಗಳವಾರ ಉಪವಿಭಾಗಾಧಿಕಾರಿ ಗೀತಾ ಹುಡೇದ್ ನೇತೃತ್ವದಲ್ಲಿ ಆಯೋಜಿಸಿದ್ದ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಸಾರ್ವಜನಿಕರು ದೂರಿನ ಸುರಿಮಳೆಗೈದ ಪರಿ.
ತಾಲೂಕಿನ ಹಿತ್ತಲದೊಡ್ಡಿಯ ಗ್ರಾಮದ ಜಿ.ಮರಿಸ್ವಾಮಿ ಮಾತನಾಡಿ, ಕುಣಗಳ್ಳಿಯಲ್ಲಿ ಸರ್ವೇ ನಂ. 5301ರಲ್ಲಿ 3 ಎಕರೆ 5 ಸೆಂಟ್ ಜಮೀನಿದೆ. ನಮ್ಮ ಜಮೀನಿನ ಜಾಗವನ್ನು ರಸ್ತೆಗೆ ಬಿಡುವಂತೆ ಕುಣಗಳ್ಳಿ ಗ್ರಾಮದ ಯಜಮಾನರು ತೊಂದರೆ ನೀಡುತ್ತಿದ್ದಾರೆ. ಇದನ್ನು ಪ್ರಶ್ನಿಸಿದರೆ, ನನ್ನನ್ನು ಅವ್ಯಾಚ ಶಬ್ದಗಳಿಂದ ನಿಂದಿಸುವ ಜತೆಗೆ ಸಾಮಾಜಿಕ ಬಹಿಷ್ಕಾರ ಹಾಕಿ 50 ಸಾವಿರ ರೂ.ದಂಡ ಹಾಕಿದ್ದಾರೆ. ಈ ಬಗ್ಗೆ ನ್ಯಾಯಾಲಯದ ಮೊರೆ ಹೋಗಿದ್ದೇನೆ. ಅಲ್ಲದೆ, ಇತ್ತೀಚೆಗೆ ನಮ್ಮ ಮನೆಯ ಗೃಹಪ್ರವೇಶಕ್ಕೆ ಯಾರೂ ಹೋಗಬಾರದು. ಹೋದವರಿಗೆ 5 ಸಾವಿರ ರೂ. ದಂಡ ಹಾಕಲಾಗುವುದೆಂದು ಡಂಗುರ ಸಾರಿಸಿದ್ದು, ಅಡುಗೆ ಪಾತ್ರೆಗಳನ್ನು ನೀಡಬಾರದೆಂದು ಹೇಳಿ ಕಿರುಕುಳ ನೀಡುತ್ತಿದ್ದಾರೆ. ನಾವು ತೋಟದ ಮನೆಯಲ್ಲಿ ವಾಸವಿದ್ದು, ನಾವು ತಿರುಗಾಡುವ ದಾರಿಯಲ್ಲಿ ಟ್ರಂಚ್ ತೆಗೆದು ತೊಂದರೆ ನೀಡುತ್ತಿದ್ದಾರೆ. ಈ ದೌರ್ಜನ್ಯದಿಂದ ಮುಕ್ತಗೊಳಿಸದಿದ್ದರೆ ಕುಟುಂಬ ಸಮೇತ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಬಿಕ್ಕಿ ಬಿಕ್ಕಿ ಕಣ್ಣೀರಿಡುತ್ತ ಅಳಲು ತೋಡಿಕೊಂಡರು.
ದೂರು ಆಲಿಸಿದ ಉಪವಿಭಾಗಾಧಿಕಾರಿ ಗೀತಾ ಹುಡೇದ, ಸಂಬಂಧಪಟ್ಟ ಸರ್ವೇ ಅಧಿಕಾರಿಗಳನ್ನು ಕರೆಸಿ ಜಮೀನಿನ ನಕ್ಷೆ ಪರಿಶೀಲಿಸಿದರು. ಜಮೀನಿನಲ್ಲಿ 8 ಅಡಿ ಕಾಲು ದಾರಿ ಇದೆ. ಆದರೆ ಇದಕ್ಕೂ ಮೀರಿ ಒಂದು ಅಡಿ ಪಡೆಯಬೇಕಾದರೂ ನಿಮ್ಮ ಒಪ್ಪಿಗೆ ಬೇಕು. ನೀವು ಹೆದರಬೇಡಿ. ಈ ಬಗ್ಗೆ ಸಂಬಂಧಪಟ್ಟವರಿಗೆ ನೋಟಿಸ್ ನೀಡಿ ಟ್ರಂಚ್ ಗುಂಡಿಯನ್ನು ಮುಚ್ಚಿಸುತ್ತೇನೆ. ಸಾಮಾಜಿಕ ಬಹಿಷ್ಕಾರ ವಿಚಾರವಾಗಿ ನಾನೇ ಖುದ್ದು ಭೇಟಿ ಮಾಡಿ ಶಾಂತಿ ಸಭೆ ಮಾಡುತ್ತೇನೆ. ಆತ್ಮಹತ್ಯೆ ಎಲ್ಲ ಸಮಸ್ಯೆಗೂ ಪರಿಹಾರವಲ್ಲ ಎಂದು ಸಮಾಧಾನಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net