

ತುಮಕೂರು: ಎಷ್ಟೇ ಪರಿಹಾರ ನೀಡಿದರೂ ನಮ್ಮ ಮಗ ಬದುಕಿ ಬರಲು ಸಾಧ್ಯವಿಲ್ಲ. ಯಾವ ಕುಟುಂಬಕ್ಕೂ ಇಂತಹ ಸಂಕಷ್ಟ ಎದುರಾಗದಿರಲಿ. ತುರ್ತು ಸಂದರ್ಭದಲ್ಲಿ ಸರ್ಕಾರ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು.
ಮನೆಗೆ ಆಧಾರವಾಗಿದ್ದ ಮಗನನ್ನು ಕಳೆದುಕೊಂಡ ನನ್ನ ಕುಟುಂಬ ಶೋಕದಲ್ಲಿದೆ....
ಇದು. ಆರ್ಸಿಬಿ ವಿಜಯೋತ್ಸವ ಸಂದರ್ಭದಲ್ಲಿ ಸಂಭವಿಸಿದ್ದ ಕಾಲ್ತುಳಿತದಲ್ಲಿ ಮೃತಪಟ್ಟ ಕುಣಿಗಲ್ ತಾಲೂಕು ಅಮೃತೂರಿನ ಮನೋಜ್
ಕುಮಾರ್ ತಂದೆ ದೇವರಾಜು ಅವರ ಕಣ್ಣೀರ ನುಡಿ.
ಸರ್ಕಾರ ವತಿಯಿಂದ 25 ಲಕ್ಷ ರೂಪಾಯಿ ಪರಿಹಾರದ ಚೆಕ್ಅನ್ನು ಭಾನುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪಾಲಕರಿಗೆ ವಿತರಿಸಲಾಯಿತು. ಈ ವೇಳೆ ಮಾತನಾಡಿದ ದೇವರಾಜು, ನನ್ನ ಮಗ ಬದುಕಿದ್ದರೆ ಇದರ ನಾಲ್ಕು ಪಟ್ಟು ಹಣ ಸಂಪಾದನೆ ಮಾಡುತ್ತಿದ್ದ. ಸರ್ಕಾರ ನೀಡಿದ ಪರಿಹಾರದ ಹಣವನ್ನು ಅವನ ತಂಗಿ ಹಾಗೂ ತಾಯಿ ಭವಿಷ್ಯಕ್ಕೆ ವಿನಿಯೋಗಿಸುತ್ತೇನೆ. ಈಗ ನಮ್ಮ ಪಾಲಿಗೆ ಮಗಳಿದ್ದಾಳೆ ಅವಳಿಗಾದರೂ ಉತ್ತಮ ಭವಿಷ್ಯ ರೂಪಿಸಿ ಕೊಡುತ್ತೇನೆ ಎಂದು ಕಣ್ಣೀರು ಹಾಕಿದರು. ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ ಹಾಗೂ ಕುಣಿಗಲ್ ತಹಸೀಲ್ದಾರ್ ರಶ್ಮಿ ಇದ್ದರು. ಸೂತಕದ ನಡುವೆಯೂ ಮೃತ ಯುವಕನ ಪಾಲಕರನ್ನು ತುಮಕೂರಿಗೆ ಕರೆಸಿಕೊಂಡ ಜಿಲ್ಲಾಡಳಿತ ಮೊದಲು ಪ್ರವಾಸಿ ಮಂದಿರದಲ್ಲಿ ಗೃಹಸಚಿವ ಡಾ.ಜಿ.ಪರಮೇಶ್ವರ ಅವರಿಂದ ಚೆಕ್ ವಿತರಿಸುವುದಾಗಿ ತಿಳಿಸಿತ್ತು. ಪರಮೇಶ್ವರ ತುರ್ತು ಕೆಲಸದ ನೆಪಹೇಳಿ ಹೊರಟ ಮೇಲೆ ಜಿಲ್ಲಾಧಿಕಾರಿ ಕಚೇರಿಗೆ ಕರೆಸಿಕೊಂಡು ಜಿಲ್ಲಾಧಿಕಾರಿ
ಶುಭಕಲ್ಯಾಣ್ ಚೆಕ್ ವಿತರಿಸಿದರು.
ಮನೂಜ್ ಬದುಕಿಸಲು ಪರದಾಡಿದ್ದ ಸ್ನೇಹಿತ: ಆರ್ಸಿಬಿ ವಿಜಯೋತ್ಸವದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಮನೂಜ್ ಕುಮಾರ್ ಬದುಕಿಸಲು ಅವರ ಸ್ನೇಹಿತರು ನಡೆಸಿದ ಹೋರಾಟದ ವಿಡಿಯೋ ಲಭ್ಯವಾಗಿದ್ದು, ವೀಸಿದವರ ಮನಕಲಕುವಂತಿದೆ. ವೀಡಿಯೋದಲ್ಲಿ ಆಟೋ ಚಾಲಕನಿಗೆ ಕೇಳಿದಷ್ಟು ಹಣ ಕೊಡುತ್ತೇವೆ, ಆಸ್ಪತ್ರೆಗೆ ಕರದುಕೊಂಡು ಹೋಗಿ ಎಂದು ಅಂಗಲಾಚಿರುವ ದೃಶ್ಯ ಸೆರೆಯಾಗಿದೆ. ಪೊಲೀಸ್ ಜೀಪು ತಡೆದು ಸಹಾಯಕ್ಕೆ ಕೇಳಿಕೊಂಡರೂ ಪ್ರಯೋಜನವಾಗಿಲ್ಲ. ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ಮನೂಜ್ ಮೃತಪಟ್ಟಿರುವುದು ದೃಶ್ಯ ವೀಸಿದವರ ಮನಕಲಕುತ್ತದೆ.