ಎವಿಕೆ ಕಾಲೇಜಿನಲ್ಲಿ ಪಾರಂಪರಿಕ ವಸ್ತು ಪ್ರದರ್ಶನ

ಎವಿಕೆ ಕಾಲೇಜಿನಲ್ಲಿ ಪಾರಂಪರಿಕ ವಸ್ತು ಪ್ರದರ್ಶನ
Published on

ಹಾಸನ: ನಗರದ ಎ.ವಿ.ಕಾಂತಮ್ಮ ಕಾಲೇಜಗೆ ನ್ಯಾಕ್ ಪೀರ್ ಸಮಿತಿ ಸೋಮವಾರ ಭೇಟಿ ನೀಡಿದ ಸಂದರ್ಭದಲ್ಲಿ ಕಾಲೇಜಿನ ಇತಿಹಾಸ ವಿಭಾಗದ ಪರಂಪರಾ ಕೂಟದ ವತಿಯಿಂದ ಪಾರಂಪರಿಕ ವಸ್ತುಗಳ ವಸ್ತು ಪ್ರದರ್ಶನ ಮತ್ತು ತ್ರಿವರ್ಣ ಧ್ವಜದ ಬಣ್ಣಗಳಾದ ಕೇಸರಿ, ಬಿಳಿ ಮತ್ತು ಹಸಿರು ಬಣ್ಣದಲ್ಲಿ ಭಾರತದ ಸ್ವಾತಂತ್ರ್ಯ ಚಳವಳಿಯ ಪ್ರಮುಖ ಘಟನೆಗಳನ್ನು, ವ್ಯಕ್ತಿಗಳನ್ನು ವಿದ್ಯಾರ್ಥಿಗಳು ರಚಿಸಿದ ಭಿತ್ತಿ ಚಿತ್ರಗಳ ಮೂಲಕ ಪ್ರದರ್ಶಿಸಲಾಯಿತು.
ಸುಮಾರು 100 ವರ್ಷಗಳಿಗೂ ಹಳೆಯದಾದ ವೀಣೆ, ತಾಳ, ತಂಬೂರಿ ಮುಂತಾದ ಸಂಗೀತ ವಾದ್ಯಗಳ ಪ್ರದರ್ಶನ ಮಾಡಲಾಯಿತು. ಗ್ರಾಮೀಣ ಹಳ್ಳಿಯ ಉಪಕರಣಗಳಾದ ಮರ, ವಂದರಿ, ಸೇರು, ಪಾವು, ಚಟಾಕು, ಲಾಟೀನ್, ಕಸೂತಿ ಬಟ್ಟೆಗಳು ಮುಂತಾದ ವಸ್ತುಗಳ ಪ್ರದರ್ಶನ ಏರ್ಪಡಿಸಲಾಯಿತು.
ಹಾಸನಾಂಬೆ, ಗೊರೂರು ಡ್ಯಾಂ, ಮಂಜರಾಬಾದ್ ಕೋಟೆ, ಶೆಟ್ಟಿಹಳ್ಳಿ ಚರ್ಚ್, ಶ್ರವಣಬೆಳಗೂಳದ ಗೊಮ್ಮಟೇಶ್ವರ, ಬೇಲೂರಿನ ಚೆನ್ನಕೇಶವ ದೇವಾಲಯ, ಹಳೆಬೀಡಿನ ಹೊಯ್ಸಳೇಶ್ವರ ದೇವಾಲಯಗಳು ಮೊದಲಾದ ಮಾದರಿಗಳನ್ನು ಪ್ರದರ್ಶಿಸಲಾಯಿತು. ಹಾಸನ ಜಿಲ್ಲೆಯ ಭೂಪಟ, ಬೆಳೆಗಳು ಮೊದಲಾದವುಗಳನ್ನು ವಿದ್ಯಾರ್ಥಿಗಳು ರಂಗೋಲಿಯಲ್ಲಿ ಬಿಡಿಸಿದರು.
ಇತಿಹಾಸ ವಿಭಾಗದ ಪರಂಪರಾ ಕೂಟದ ಸಂಚಾಲಕರಾದ ಡಾ.ಎನ್.ಎಸ್.ಶಶಿಕಲಾ ಅವರ ಮಾರ್ಗದರ್ಶನದಲ್ಲಿ ಈ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ನ್ಯಾಕ್ ಸಮಿತಿಯಲ್ಲಿ ಮುಂಬೈನ ಕೆಇಟಿಎಸ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರೀತ ನಿಲೇಶ್, ಪ್ರೊ.ಕಲ್ಪೇಶ್ ಎಚ್.ವಾಂಡಾ, ಕೊಯಮತ್ತೂರಿನ ಪ್ರೊ.ಜರಿನಾಬಿ ಉಬೈದುಲ್ಲಾ, ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಸಿ.ಯತೀಶ್ವರ್, ಪ್ರೊ.ಎಸ್.ಆರ್.ತಮ್ಮಯ್ಯ, ಡಾ.ಕೆ.ಜಿ.ಸುರೇಶ್ ಕುಮಾರ್, ಡಾ.ಪಿ.ಮಂಜುಳಾ, ಪ್ರೊ.ಎಸ್.ಎಚ್.ವಾರಿಜಾ, ಎಸ್.ಆರ್.ಶೀಲಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net