

ಹಗರಿಬೊಮ್ಮನಹಳ್ಳಿ: ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘ ಶೇಂಗಾ, ಸೂರ್ಯಕಾಂತಿ ಹಾಗೂ ಇತರ ಎಣ್ಣೆ ಬೀಜಗಳ ಉತ್ಪಾದನೆಗಾಗಿ ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆ ಮಾಡಬೇಕು. ಈ ಮೂಲಕ ರೈತರಿಂದ ಫಸಲನ್ನು ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿದರೆ ರೈತರಿಗೆ ಅನುಕೂಲವಾಗಲಿದೆ ಎಂದು ಗದ್ದಿಕೆರೆ ಚರಂತೇಶ್ವರ ಸ್ವಾಮೀಜಿ ಹೇಳಿದರು.
ತಂಬ್ರಹಳ್ಳಿಯಲ್ಲಿ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘದ ಮಳಿಗೆ ಉದ್ಘಾಟಿಸಿ ಭಾನುವಾರ ಮಾತನಾಡಿದರು. ಸಂಘದ ಅಧ್ಯಕ್ಷ ಸುಣಗಾರ ಪರಶುರಾಮ ಮಾತನಾಡಿ, ಮುಂದಿನ ದಿನಗಳಲ್ಲಿ ಎಣ್ಣೆ ಬೀಜ ಬೆಳೆಗಳ ಉತ್ಪಾದನೆಗಾಗಿ ರೈತರಿಗೆ ಉತ್ತೇಜನ ನೀಡಲಾಗುವುದು. ಈ ಮೂಲಕ ಎಣ್ಣೆ ಬೀಜ ಖರೀದಿ ಮಾಡಿ ನ್ಯಾಯಯುತ ಬೆಲೆ ಒದಗಿಸಲಾಗುವುದು. ರೈತರ ಅನುಕೂಲಕ್ಕಾಗಿ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಪರಿಕರಗಳನ್ನು ರಿಯಾಯಿತಿ ದರದಲ್ಲಿ ಒದಗಿಸಲಾಗುವುದು ಎಂದರು.
ಉಪಾಧ್ಯಕ್ಷ ಹುಗ್ಗಿ ಬಸವರೆಡ್ಡಿ, ನಿರ್ದೇಶಕರಾದ ಗೌರಜ್ಜನವರ ಕೊಟ್ರೇಶ್, ಹರಿಜನ ಮೈಲಪ್ಪ, ಎಂ.ಆನಂದ, ಕಾಕಳ್ಳಿ ನೀಲಮ್ಮ, ವದಗನಾಳ್ ಕಾಳಮ್ಮ, ಕೊಟಿಗಿ ಮಲ್ಲಿಕಾರ್ಜುನ, ತಳವಳ್ಳಿ ಹುಲುಗಪ್ಪ, ಮಾದನೂರು ಮಾರುತೇಶ್, ಕೃಷ್ಣಾಪುರ ಶೀಗನಳ್ಳಿ ಕರಿಯಪ್ಪ ಇದ್ದರು.