

ಡಿ.ಎಂ.ಮಹೇಶ್, ದಾವಣಗೆರೆ ಬೀದಿಬದಿಯ ಎಳನೀರು ಹೈಜೆನಿಕ್ ಆಗಿದ್ದರೆ ಸೇವನೆಯ ಹಿತಾನುಭವವೇ ಬೇರೆ. ಎಳನೀರು ಗಂಜಿಗೆ ಗ್ರಾಹಕರ ಇಷ್ಟದ ಹಣ್ಣಿನ ಫ್ಲೇವರ್ ಹಾಕಿ ನೀಡಿದರೆ ಸವಿಯುವ ಉನ್ಮಾದವೇ ಬೇರೆ. ಈ ಎಲ್ಲವನ್ನೂ ಸಾಧ್ಯವಾಗಿಸುವತ್ತ ಹೆಜ್ಜೆ ಇರಿಸಿದೆ ದಾವಣಗೆರೆ ತಾಲೂಕಿನ ನಾಗನೂರು ಭೂಮಾತಾ ರೈತ ಉತ್ಪಾದಕರ ಕಂಪನಿ ಲಿಮಿಟೆಡ್. ಎಳನೀರುಕಾಯಿ ಕೊಚ್ಚಲು ಸರಳ ಯಂತ್ರೋಪಕರಣಗಳುಳ್ಳ ವಿಶೇಷ ಹೈಟೆಕ್ ವಾಹನ ಬಂದಿದ್ದು, ಎಳನೀರಿಗೆ ಹೊಸ ಬ್ರಾೃಂಡಿಂಗ್ ಕೊಡಲು ಸಜ್ಜಾಗಿದೆ. ಬೆಂಗಳೂರಿನಲ್ಲಿ ಜ. 5ರಿಂದ ನಡೆಯಲಿರುವ ಅಂತಾರಾಷ್ಟ್ರೀಯ ಮೇಳದಲ್ಲಿ ವಾಹನ ಪ್ರದರ್ಶನ ಕಾಣಲಿದೆ. ಗ್ರಾಹಕರಿಗೆ ಎಳನೀರಿನಲ್ಲಿ ಲೆಮೆನ್ ಫ್ಲೇವರ್, ಎಳಗಂಜಿಯನ್ನು ಮ್ಯಾಂಗೋ, ಚಾಕಲೇಟ್, ಚಾಟ್‌ಮಸಾಲಾ ಫ್ಲೇವರ್ ರೂಪದಲ್ಲಿ ನೀಡುತ್ತಿದೆ! ಕೇರಳದಲ್ಲಿ ಇಂಥಹದ್ದೇ ತಳ್ಳುಗಾಡಿ ಇತ್ತಾದರೂ ಜನಪ್ರಿಯತೆ ಕಾಣಲಿಲ್ಲ. ಇದನ್ನೇ ತುಸು ಬದಲಾವಣೆಯೊಂದಿಗೆ ಕರ್ನಾಟಕದಲ್ಲಿ ಮೊದಲ ಬಾರಿಗೆ ಪರಿಚಯಿಸಲು ಮುಂದಾಗಿದೆ ಈ ಎಫ್‌ಪಿಒ. ದಾವಣಗೆರೆ ತಾಲೂಕಿನ ಜರೀಕಟ್ಟೆ, ನಾಗನೂರು, ಮಹದೇವಪುರ ಗ್ರಾಮಗಳಿಂದ ದಿನಕ್ಕೆ 8ರಿಂದ 10 ಟ್ರಕ್ ಪ್ರಮಾಣದ ಎಳನೀರುಕಾಯಿ ಪೂನಾಗೆ ಮಾರಾಟವಾಗುತ್ತದೆ. ತೆಂಗು ಬೆಳೆಗಾರರಿಗೆ ಸ್ಥಳೀಯ ಮಾರುಕಟ್ಟೆ ಒದಗಿಸುವ ಐಡಿಯಾ, ವಾಹನದ ಟ್ರೆಂಡ್‌ಗೆ ಇಂಬು ನೀಡಿದೆ. ನೈಸರ್ಗಿಕ ಪಾನೀಯ ಹೆಸರಿನಡಿ ಬ್ರ್ಯಾಂಡಿಂಗ್ ನೀಡಲಾಗಿದೆ. ಎಳ್ನೀರು ಡಾಟ್ ಕಾಂ ವೆಬ್ ಕೂಡ ಲಗ್ಗೆ ಇಟ್ಟಿದೆ. ವಾಹನದ ವಿಶೇಷವೇನು? ಸ್ಟೈನ್‌ಲೆಸ್ ಸ್ಟೀಲ್‌ನಿಂದ ತಯಾರಿಸಿದ ಎರಡು ಸಲಕರಣೆಗಳಿವೆ. ಎಳನೀರು ಕೊಚ್ಚಿ, ನೀರನ್ನು ಶುದ್ದೀಕರಿಸಿ ಪೇಪರ್ ಕಪ್, ಪೇಪರ್ ಸ್ಟ್ರಾ ಬಳಸಿ ಗರಿಷ್ಠ 250 ರಿಂದ 300 ಮಿ.ಮೀ. ಪ್ರಮಾಣದಷ್ಟು ನೀಡಲಾಗುತ್ತದೆ. ಎಳನೀರು, ಎಳಗಂಜಿಗೆ ನಾನಾ ಫ್ಲೇವರ್ ನೀಡಲಾಗುತ್ತಿದೆ. ವಾಹನದ ಕೆಳಭಾಗ ಸುಮಾರು 140 ಎಳನೀರು ಸಂಗ್ರಹ ಸಾಮರ್ಥ್ಯವಿದ್ದರೆ, ಎಡಬದಿ ಎಲ್ಲ ವೇಸ್ಟೇಜ್‌ಗಳನ್ನು ಸಂಗ್ರಹಿಸಿ, ಕಂಪನಿಯ ಕಚೇರಿ ಆವರಣದಲ್ಲಿ ಗೊಬ್ಬರ ತಯಾರಿಸುವ ಚಿಂತನೆ ಇದೆ. 60 ಸಾವಿರ ರೂ.ಇದರ ಬೆಲೆ ತಯಾರಿಗೆ ತಗುಲಿದ ವೆಚ್ಚ 60 ಸಾವಿರ ರೂ. ನಿಗದಿಯಾಗಿದೆ. ಖರೀದಿದಾರರು ಪ್ರಾಂಚೈಸಿ ಪಡೆಯಬಹುದು. ರೈತ ಉತ್ಪಾದಕ ಕಂಪನಿಯಡಿ ಇರುವ 450 ರೈತರು ಬೆಳೆದ ಎಳನೀರುಗಾಯಿ ಖರೀದಿಸಬೇಕೆಂಬ ಷರತ್ತು ಮಾಡಲಾಗುತ್ತಿದೆ. ಎಲ್ಲದರ ಲಾಭವನ್ನೂ ಕಂಪನಿಯ ಎಲ್ಲ ರೈತ ಶೇರುದಾರರಿಗೆ ಸಲ್ಲಿಕೆಯಾಗಲಿದೆ. ಇನ್ನೊಂದು ತಿಂಗಳಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಇಂಥಹ 15 ವಾಹನ ಮಾರುಕಟ್ಟೆಗೆ ಇಳಿಯಲಿವೆ. ಇದರಿಂದ ಎಳನೀರಿಗೆ ಬೇಡಿಕೆ ಜತೆಗೆ ತೆಂಗು ಬೆಳೆಗಾರರಿಗೆ ಲಾಭ ಹೆಚ್ಚುವ ನಿರೀಕ್ಷೆ ಇದೆ. ಎಳನೀರು ಕೀಳುವ ಸರಳ ಯಂತ್ರ ಮಾರುಕಟ್ಟೆಗೆ ತರಲು ಈ ಕಂಪನಿ ಸಿದ್ಧತೆ ನಡೆಸಿದೆ. ---
ಎಳನೀರಿಗೆ ಬ್ರ್ಯಾಂಡಿಂಗ್ ನೀಡುವುದು ನಮ್ಮ ಪ್ರಯತ್ನ. ಕೂಲಿಕಾರ್ಮಿಕರ ಕೊರತೆ ನೀಗಿಸಿ, ಎಳನೀರು ಕೀಳುವ 2 ಯಂತ್ರಗಳನ್ನು ಸಿದ್ಧಪಡಿಸಿದ್ದು ಒಂದನ್ನು ಕಡಿಮೆ ದರದ ಬಾಡಿಗೆ ರೂಪದಲ್ಲಿ ನೀಡುವ ಚಿಂತನೆ ನಡೆಸಿದ್ದೇವೆ. ಎನ್.ಕೆ. ಅರುಣ್‌ಕುಮಾರ್ ಅಧ್ಯಕ್ಷರು, ಭೂಮಾತಾ ರೈತ ಉತ್ಪಾದಕರ ಕಂಪನಿ ಲಿಮಿಟೆಡ್.
---
ಅಂತಾರಾಷ್ಟ್ರೀಯ ಮೇಳದಲ್ಲಿ ಮೊದಲ ಬಾರಿಗೆ ಎಳನೀರು, ಎಳಗಂಜಿಗೆ ಫ್ಲೇವರ್ ಬಳಸಿ ಗ್ರಾಹಕರಿಗೆ ನೀಡುತ್ತಿದ್ದೇವೆ. ಈ ವಾಹನದಿಂದ ರೈತರಿಗೆ ಲಾಭ, ಗ್ರಾಹಕರಿಗೆ ಹೈಜೆನಿಕ್ ಎಳನೀರು ಸಿಕ್ಕರೆ, ಪರಿಸರಸ್ನೇಹಿ ವಾತಾವರಣ ನಿರ್ಮಾಣವಾಗಲಿದೆ. ಮಹೇಶ್ವರಪ್ಪ ಪತ್ರೆ, ಸಿಇಒ, ಭೂಮಾತಾ ರೈತ ಉತ್ಪಾದಕರ ಕಂಪನಿ ಲಿಮಿಟೆಡ್.