ಎಳವೆಯಲ್ಲೇ ಸಂಸ್ಕಾರ, ಸಂಸ್ಕೃತಿ ಕಲಿಸಿ

Oplus_0
Oplus_0
Published on

ಚನ್ನರಾಯಪಟ್ಟಣ : ಮಕ್ಕಳಿಗೆ ಎಳವೆಯಲ್ಲೇ ಸಂಸ್ಕಾರ, ಸಂಸ್ಕೃತಿ ಕಲಿಸಿದರೆ ಅವರು ಜವಾಬ್ದಾರಿಯುತ ಪ್ರಜೆಗಳಾಗಲು ಸಾಧ್ಯ ಎಂದುಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎ.ಎಲ್.ನಾಗೇಶ್ ಹೇಳಿದರು. ಪಟ್ಟಣದಲ್ಲಿನ ಶಾಲಿನಿ ಇಂಟರ್‌ನ್ಯಾಷನಲ್ ಸ್ಕೂಲ್‌ನ ನರ್ಸರಿ ವಿಭಾಗದ ಮಕ್ಕಳಿಗೆ ಗುರುವಾರ ಹಮ್ಮಿಕೊಂಡಿದ್ದ ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಅಕ್ಷರ ಅಭ್ಯಾಸದ ಮೂಲಕ ಸಾಂಪ್ರದಾಯಿಕ ಶಿಕ್ಷಣ ಆರಂಭ ಮಾಡುವುದು ನಮ್ಮ ಸಂಸ್ಕೃತಿ. ಮಗುವಿಗೆ ಉತ್ತಮ ವಿದ್ಯೆ ದೊರೆತು ಅವರು ಜ್ಞಾನವಂತರಾಗಬೇಕು. ನಾಳಿನ ಉತ್ತಮ ಪ್ರಜೆಯಾಗಬೇಕು ಎಂಬುದು ಮುಖ್ಯ ಉದ್ದೇಶ. ಈ ನಿಟ್ಟಿನಲ್ಲಿ ಮಗುವಿಗೆ ಏನೆಲ್ಲಾ ಕೊಡಬೇಕು ಎಂಬುದನ್ನು ಪಾಲಕರು ಅರಿತಿರಬೇಕು. ಜೀವನದಲ್ಲಿ ಕೇವಲ ಹಣ ಸಂಪಾದನೆ ಮಾಡುವುದೇ ಮುಖ್ಯವಲ್ಲ. ಗುಣಗಳೂ ಮುಖ್ಯ ಎಂದವರು ನುಡಿದರು.ಶಾಲೆಯಲ್ಲಿ ಕಲಿತವರಿಗೆಲ್ಲಾ, ಉತ್ತಮ ಅಂಕ ಪಡೆದವರಿಗೆಲ್ಲಾ ಇಂದು ಕೆಲಸ ಸಿಗುತ್ತದೆ ಎಂಬುದು ಭ್ರಮೆ.ವಿದ್ಯೆ ಮತ್ತು ಕೌಶಲ ಬಹು ಪ್ರಧಾನ. ಮಗುವಿನಲ್ಲಿರುವ ಪ್ರತಿಭೆ ಅನಾವರಣಗೊಳಿಸಲು ಶಿಕ್ಷಣ ಎಂಬುದು ಸಾಧನವಾಗಬೇಕು. ಸರಿಯಾದ ಮಾರ್ಗದರ್ಶನದೊಂದಿಗೆ ಬದುಕು ಕಟ್ಟಿಕೊಳ್ಳುವ ಹಾದಿ ತೋರಿಸುವುದು ಪಾಲಕರ ಕರ್ತವ್ಯ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net