ಎಳನೀರು ದರ ದಾಖಲೆ ಮಟ್ಟಕ್ಕೆ ಏರಿಕೆ

oppo_2
oppo_2
Published on

ಮದ್ದೂರು: ಏಷ್ಯಾದಲ್ಲೇ ಅತಿ ದೊಡ್ಡ ಮಾರುಕಟ್ಟೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಪಟ್ಟಣದ ಎಳನೀರು ಮಾರುಕಟ್ಟೆಯಲ್ಲಿ (ಎಪಿಎಂಸಿಯಲ್ಲಿ) ಇತಿಹಾಸದಲ್ಲೇ ಅತಿ ಹೆಚ್ಚು ದರಕ್ಕೆ ಎಳನೀರು ಮಾರಾಟವಾಗುವ ಮೂಲಕ ದಾಖಲೆ ನಿರ್ಮಿಸಿದೆ.

ಸಾಮಾನ್ಯವಾಗಿ ಬೇಸಿಗೆ ಸಂದರ್ಭದಲ್ಲಿ 40 ರಿಂದ 50 ರೂ.ಗೆ ಮಾರಾಟವಾಗುತ್ತಿದ್ದ ಎಳನೀರು ಈದೀಗ ಉತ್ತಮ ಗುಣಮಟ್ಟದ ಎಳನೀರು ಒಂದಕ್ಕೆ 55 ರೂ.ಗಳಿಂದ 60 ರೂ.ಗಳವರೆಗೆ ಮಾರುಕಟ್ಟೆಯಲ್ಲಿ ವರ್ತಕರು ರೈತರಿಂದ ಖರೀದಿ ಮಾಡುತ್ತಿರುವುದು ಎಳನೀರು ಮಾರುಕಟ್ಟೆಯಲ್ಲಿ ಇತಿಹಾಸದಲ್ಲೆ ಪ್ರಥಮ ಎನ್ನಲಾಗಿದೆ. ಮುಂದಿನ ದಿನಗಳಲ್ಲಿ ಎಳನೀರಿನ ಬೆಲೆ ಒಂದಕ್ಕೆ 60 ರೂ.ಗಳಿಗಿಂತ ಹೆಚ್ಚಾದರೂ ಅಚ್ಚರಿಪಡಬೇಕಾಗಿಲ್ಲ.

ದರ ಹೆಚ್ಚಳಕ್ಕೆ ಹಲವಾರು ಕಾರಣಗಳು ಇದ್ದು, ಬೇಸಿಗೆಯ ಬಿಸಿಲಿನ ತಾಪ ಹೆಚ್ಚಳ, 2 ವರ್ಷಗಳ ಹಿಂದೆ ಸತತ ಬರಗಾಲ ಇದ್ದದ್ದು, ಪ್ರಸ್ತುತ ಸಂದರ್ಭದಲ್ಲಿ ತೆಂಗಿನ ಕಾಯಿಗೆ ದರ ದುಬಾರಿಯಾಗಿರುವುದು ಹಾಗೂ ಕಪ್ಪು ತಲೆ ಸೇರಿದಂತೆ ವಿವಿಧ ಕೀಟಗಳ ಬಾಧೆ ಸೇರಿದಂತೆ ಹಲವಾರು ಕಾರಣಗಳಿಂದ ಎಳನೀರು ಫಸಲು ಗಣನೀಯವಾಗಿ ಇಳಿಕೆಯಾಗಿದೆ. ಸಹಜವಾಗಿಯೇ ಫಸಲು ಕಡಿಮೆಯಾದ ಕಾರಣ ದರ ಹೆಚ್ಚಳವಾಗಿದೆ ಇದರಿಂದ ರೈತರಿಗೆ ಮತ್ತು ವರ್ತಕರಿಗೆ ತುಂಬಾ ತೊಂದರೆಯಾಗಿದೆ.

ನಿರೀಕ್ಷಿತ ಪ್ರಮಾಣದಲ್ಲಿ ತೆಂಗಿನ ಫಸಲು ಬಾರದ ಕಾರಣ ರೈತರಿಗೆ ತೊಂದರೆಯಾಗುತ್ತಿದ್ದರೆ, ವರ್ತಕರು ಹೆಚ್ಚಿನ ದರಕ್ಕೆ ಎಳನೀರು ಖರೀದಿ ಮಾಡಬೇಕು. ಮದ್ದೂರು ಮಾರುಕಟ್ಟೆಗೆ ಮದ್ದೂರು, ಮಂಡ್ಯ, ಚಾಮರಾಜನಗರ, ಕೆ.ಆರ್.ಪೇಟೆ, ಕುಣಿಗಲ್ ಸೇರಿದಂತೆ ಹಲವಾರು ಭಾಗಗಳಿಂದ ರೈತರು ಪಟ್ಟಣದ ಎಳನೀರು ಮಾರುಕಟ್ಟೆಗೆ ಎಳನೀರು ತಂದು ಮರಾಟ ಮಾಡುತ್ತಾರೆ. ರೈತರಿಂದ ಎಳನೀರು ಖರೀದಿ ಮಾಡಿದ ವರ್ತಕರು ಜಮ್ಮು-ಕಾಶ್ಮೀರಾ, ಪೂನಾ, ಪಂಜಾಬ್, ಮಹಾರಾಷ್ಟ್ರ, ಮಧ್ಯಪ್ರದೇಶ, ನಾಗಪುರ, ಮುಂಬೈ, ನೇಪಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಇಲ್ಲಿಯ ಎಳನೀರಿಗೆ ಬಾರಿ ಬೇಡಿಕೆ ಇರುವುದರಿಂದ ಇಲ್ಲಿಂದ ಅಲ್ಲಿಗೆ ಮಾರಾಟ ಮಾಡುತ್ತಾರೆ.

ಪ್ರತಿನಿತ್ಯ ಪಟ್ಟಣದ ಎಳನೀರು ಮಾರುಕಟ್ಟೆಯಿಂದ ಸುಮಾರು 40 ರಿಂದ 50 ಲಾರಿಗಳು ಬೇರೆ ರಾಜ್ಯಗಳಿಗೆ ಎಳನೀರು ಪೂರೈಕೆಯಾಗುತ್ತಿದ್ದು, ವರ್ತಕರು ರೈತರಿಂದ 60 ರೂ. ಎಳನೀರು ಖರೀದಿ ಮಾಡಿ ಖರ್ಚು, ವೆಚ್ಚ ಹಾಗೂ ಲಾಭ ಸೇರಿಸಿ 60 ರೂ.ಗಳಿಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಬೇಕಾದ ಅನಿವಾರ್ಯತೆ ಇರುವುದರಿಂದ ಪ್ರಸ್ತುತ ವ್ಯಾಪಾರ ಮಾಡುವುದು ತುಂಬಾ ಕಷ್ಟ ಎನ್ನುತ್ತಾರೆ ಹೆಸರು ಹೇಳದ ವರ್ತಕರೊಬ್ಬರು.

ಇದೇ ರೀತಿ ಮುಂದುವರಿದರೆ ರೈತರಿಗೂ ಸಮಸ್ಯೆ ಹಾಗೂ ವರ್ತಕರಿಗೂ ಎಳನೀರು ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವುದು ಕಷ್ಟವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net