

ಬೆಂಗಳೂರು: ತಾಲೂಕಿನ ದೇವನಗೊಂದಿಯಲ್ಲಿರುವ ಇಂಡೇನ್ ಎಲ್‌ಪಿಜಿ ಬಾಟ್ಲಿಂಗ್ ್ಲಾಂಟ್ ಘಟಕಕ್ಕೆ ಶಾಸಕ ಶರತ್ ಬಚ್ಚೇಗೌಡ ಸೋಮವಾರ ಭೇಟಿ ನೀಡಿ, ಪ್ರದೇಶದಲ್ಲಿ ಕೈಗೊಂಡಿರುವ ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲಿಸಿದರು.
ಆಂಧ್ರ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಅನಿಲ ಸೋರಿಕೆಯಿಂದ ಉಂಟಾದ ಅನಾಹುತವನ್ನು ಗಮನದಲ್ಲಿಟ್ಟುಕೊಂಡು ತಾಲೂಕಿನ ಗ್ರಾಮಸ್ಥರ ರಕ್ಷಣೆಗಾಗಿ ದೇವನಗೊಂದಿಯ ಘಟಕದಲ್ಲಿ ಅಳವಡಿಸಿಕೊಂಡಿರುವ ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿ ಪಡೆಯಲು ಘಟಕಕ್ಕೆ ಭೇಟಿ ನೀಡಲಾಗಿದೆ. ಅನಾಹುತ ಸಂಭವಿಸದಂತೆ ಅಧಿಕಾರಿಗಳು ಸೂಕ್ತ ಮುಂಜಾಗ್ರತಾ ಕ್ರಮ ಪಾಲಿಸಲು ಸೂಚಿಸಲಾಗಿದೆ ಎಂದು ಶಾಸಕರು ತಿಳಿಸಿದರು.
ತಾಲೂಕಿನ ಪಿಲ್ಲಗುಂಪೆ ಕೈಗಾರಿಕಾ ಪ್ರದೇಶದಲ್ಲಿ ಸಣ್ಣ ಪ್ರಮಾಣದ ಸಿಲಿಂಡರ್‌ಗಳಿಗೆ ಅನಿಲ ತುಂಬುವ ಸ್ಥಾವರಗಳನ್ನು ಸಹ ಅಧಿಕಾರಿಗಳು ಪರೀಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ ಎಂದರು.
ಸ್ಥಾವರದ ಪ್ರಧಾನ ವ್ಯವಸ್ಥಾಪಕ ನಬಾ ಕುಮಾರ್ ಮಾತನಾಡಿ, 2001ರಲ್ಲಿ ಸುಮಾರು 93 ಎಕರೆ ಪ್ರದೇಶದಲ್ಲಿ ಸ್ಥಾವರ ಪ್ರಾರಂಭಗೊಂಡಿದ್ದು, 60 ಎಕರೆ ಪ್ರದೇಶವನ್ನು ಅಪಾಯಕಾರಿ ವಲಯವೆಂದು ಗುರುತಿಸಲಾಗಿದೆ. ಪ್ರತಿದಿನ 1 ಲಕ್ಷಕ್ಕೂ ಹೆಚ್ಚು ಸಿಲಿಂಡರ್‌ಗಳಿಗೆ ಅನಿಲವನ್ನು ಭರ್ತಿ ಮಾಡಲಾಗುತ್ತಿದ್ದು, ನಿಗದಿಪಡಿಸಿರುವ ಎಲ್ಲ ಸುರಕ್ಷತಾ ನಿಯಮ ಪಾಲಿಸಲಾಗುತ್ತಿದೆ. ಉಷ್ಣಾಂಶದ ತೀವ್ರತೆ ಪತ್ತೆಹಚ್ಚಲು ವಿಶೇಷವಾದ ಸ್ವಯಂಚಾಲಿತವಾಗಿ ನೀರು ಸಿಂಪಡಿಸುವ ಸಲಕರಣೆ ಅಳವಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.
ಸಂಸ್ಥೆಯ ತೈಲ ಸರಬರಾಜು ವಿಭಾಗದ ಪ್ರಧಾನ ವ್ಯವಸ್ಥಾಪಕ ರಾಜೇಂದ್ರಪ್ರಸಾದ್, ಜಿಲ್ಲಾ ಪಂಚಾಯಿತಿ ಸದಸ್ಯ ಕೆ. ಕೃಷ್ಣಮೂರ್ತಿ, ವಾಗಟ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಚಂದ್ರ, ಕಾರ್ಖಾನೆ, ಬಾಯ್ಲರ್ ಇಲಾಖೆಯ ಜಿಲ್ಲಾ ಉಪನಿರ್ದೇಶಕ ನರಸಿಂಹಮೂರ್ತಿ, ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ಸಿದ್ದೇಗೌಡ ಇದ್ದರು.