

ಆಲೂರು: ಶಿವ ಸ್ಮರಣೆಯ ಮಹಾಶಿವರಾತ್ರಿ ಹಬ್ಬವನ್ನು ಶನಿವಾರ ಆಲೂರು ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಎಲ್ಲ ಈಶ್ವರ ದೇವಾಲಯಗಳಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಭಕ್ತರು ಶನಿವಾರ ಬೆಳಗ್ಗೆಯಿಂದ ರಾತ್ರಿವರೆಗೆ ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆದರು. ರಾತ್ರಿ ಶಿವನಾಮ ಸ್ಮರಿಸುತ್ತಾ ಜಾಗರಣೆ ಮಾಡಿ ಭಕ್ತಿ ಮೆರೆದರು. ಓಂ ನಮಃ ಶಿವಾಯ ಎಲ್ಲ ದೇಗುಲಗಳಲ್ಲಿಯೂ ಅನುರಣಿಸುತ್ತಿತ್ತು.
ಪಟ್ಟಣದ ಕೆಇಬಿ ಸರ್ಕಲ್ನಲ್ಲಿರುವ ಸಂಗಮೇಶ್ವರಸ್ವಾಮಿ ದೇವಸ್ಥಾನ, ಯಡೂರು ಗ್ರಾಮದಲ್ಲಿರುವ ಈಶ್ವರಸ್ವಾಮಿ ದೇವಸ್ಥಾನ, ಹಳೇ ಆಲೂರು ಗ್ರಾಮದಲ್ಲಿರುವ ಮಲ್ಲೇಶ್ವರಸ್ವಾಮಿ ದೇವಸ್ಥಾನ, ಮರಸು ಗ್ರಾಮದಲ್ಲಿರುವ ಕಲ್ಲೇಶ್ವರ ಸ್ವಾಮಿ ದೇವಸ್ಥಾನ, ಜೆ.ತಿಮ್ಮನಹಳ್ಳಿ ಗ್ರಾಮದಲ್ಲಿರುವ ಭೈರವೇಶ್ವರಸ್ವಾಮಿ ದೇವಸ್ಥಾನ, ಕಿರಗಡಲು ಗ್ರಾಮದಲ್ಲಿರುವ ಪಂಚಲಿಂಗೇಶ್ವರ ದೇವಸ್ಥಾನ ಸೇರಿದಂತೆ ತಾಲೂಕಿನ ಎಲ್ಲ ಈಶ್ವರ ದೇವಸ್ಥಾನಗಳಲ್ಲಿ ಶಿವರಾತ್ರಿಯ ವಿಶೇಷ ಪೂಜೆ ಜರುಗಿದವು.
ಆಲೂರು ಪಟ್ಟಣದ ಕೆಇಬಿ ಸರ್ಕಲ್ನಲ್ಲಿರುವ ಶ್ರೀ ಸಂಗಮೇಶ್ವರಸ್ವಾಮಿ ದೇವಸ್ಥಾನದಲ್ಲಿ ವಿರುಪಾಪುರ ಗ್ರಾಮದ ಶಶಿ ಪುರೋಹಿತರಿಂದ ದೇವರ ಮೂರ್ತಿ ಹಾಗೂ ಶಿವಲಿಂಗಕ್ಕೆ ಅಭಿಷೇಕ ಮಾಡಲಾಯಿತು. ದೇಗುಲಗಳಲ್ಲಿರುವ ಎಲ್ಲ ದೇವರು ಮೂರ್ತಿಗಳಿಗೆ ವಿಶೇಷ ಹೂವಿನ ಅಭಿಷೇಕ, ದೇವತಾ ಮಹಾಪೂಜೆ, ಮಹಾ ಮಂಗಳಾರತಿ ಮುಂತಾದ ಪೂಜಾ ವಿಧಿ ವಿಧಾನಗಳು ನೆರವೇರಿದವು.
ತಾಲೂಕು ವೀರಶೈವ ಸಂಘದ ಅಧ್ಯಕ್ಷ ರೇಣುಕಾ ಪ್ರಸಾದ್, ಉಪಾಧ್ಯಕ್ಷ ಡಿ.ಎಸ್.ಜಯಣ್ಣ, ಖಜಾಂಚಿ ಟೀಕರಾಜ್, ಮುಖಂಡರಾದ ಪ್ರಸನ್ನಕುಮಾರ್, ಯೋಗೇಶ್ ಸೇರಿದಂತೆ ದೇಗುಲಗಳ ಅರ್ಚಕರು ಹಾಗೂ ಭಕ್ತರು ಹಾಜರಿದ್ದರು.